ADVERTISEMENT

ಶ್ರೀನಗರ: ಜಾಮೀಯ ಮಸೀದಿಯಲ್ಲಿ ಏಳು ತಿಂಗಳ ನಂತರ ಸಾಮೂಹಿಕ ಪ್ರಾರ್ಥನೆಗೆ ಅವಕಾಶ

ಶ್ರೀನಗರದ ಐತಿಹಾಸಿಕ ಜಾಮೀಯ ಮಸೀದಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 10:00 IST
Last Updated 1 ಮಾರ್ಚ್ 2022, 10:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕೋವಿಡ್‌ನಿಂದಾಗಿ ಕಳೆದ ಏಳು ತಿಂಗಳಿಂದ ಮುಚ್ಚಲಾಗಿದ್ದ ಇಲ್ಲಿನ ಐತಿಹಾಸಿಕ ಜಾಮೀಯ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಸ್ಥಳೀಯ ಆಡಳಿತ ನಿರ್ಧರಿಸಿದೆ.

ಕಾಶ್ಮೀರದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ 600 ವರ್ಷಗಳ ಇತಿಹಾಸವಿರುವ ಜಾಮೀಯ ಮಸೀದಿಯು ಕೋವಿಡ್‌ನಿಂದಾಗಿ ಕಳೆದ 30 ವಾರಗಳಿಂದ ಮುಚ್ಚಲಾಗಿತ್ತು.

ಕಾಶ್ಮೀರ ವಿಭಾಗೀಯ ಆಯುಕ್ತ ಪಾಂಡುರಂಗ ಕೆ.ಪೊಲೆ ಅವರೊಂದಿಗೆ ಶ್ರೀನಗರದ ಹಳೆ ಬಡಾವಣೆಯ ನೌಹಟ್ಟ ಪ್ರದೇಶದಲ್ಲಿನ ಜಾಮೀಯ ಮಸೀದಿಗೆ ಸೋಮವಾರ ಭೇಟಿ ನೀಡಿದ್ದ ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌, ಆವರಣವನ್ನು ಪರಿಶೀಲನೆ ನಡೆಸಿ ಮಸೀದಿಯ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದರು.

ADVERTISEMENT

ನಂತರ ಮಾತನಾಡಿದ ವಿಜಯಕುಮಾರ್‌, ‘ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಿ ಜಾಮೀಯ ಮಸೀದಿಯನ್ನು ಮುಂದಿನ ಶುಕ್ರವಾರದಿಂದ ಮತ್ತೆ ತೆರೆಯಲು ನಾವು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಐತಿಹಾಸಿಕ ಮಸೀದಿಯು ಕಳೆದ ಎರಡೂವರೆ ವರ್ಷಗಳಲ್ಲಿ ಬಹುತೇಕ ದಿನಗಳು ಮುಚ್ಚಿದ್ದು, 2019ರ ಆಗಸ್ಟ್‌ನಲ್ಲಿ ಸಂವಿಧಾನ 370ನೇ ವಿಧಿ ರದ್ದುಗೊಳಿಸಿದ ನಂತರ ಸತತ ನಾಲ್ಕು ತಿಂಗಳು ಮುಚ್ಚಿತ್ತು. ನಂತರ ಕೋವಿಡ್‌ನಿಂದಾಗಿ 2020ರ ಮಾರ್ಚ್‌ನಲ್ಲಿ ಮಸೀದಿಯನ್ನು ಮುಚ್ಚಲಾಗಿತ್ತು.

ಕೋವಿಡ್‌ ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಮಾಡಿ ಇತರೆ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶಾವಕಾಶ ನೀಡಲಾಗಿದ್ದರೂ ಐತಿಹಾಸಿಕ ಜಾಮೀಯ ಮಸೀದಿಯಲ್ಲಿ ಮಾತ್ರ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಸರ್ಕಾರದ ಈ ನಡೆಗೆ ಮಸೀದಿ ನಿರ್ವಹಣಾ ಸಮಿತಿಯು ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೇ ಮುಚ್ಚಿರುವ ಮಸೀದಿಯನ್ನು ಪುನಃ ತೆರೆಯುವಂತೆ ಒತ್ತಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.