ಮದುರೈ (ತಮಿಳುನಾಡು): ತಂದೆ– ಮಗನಿಗೆ ಚಿತ್ರಹಿಂಸೆ ನೀಡಿದ ಹಾಗೂ ನಂತರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಅವರು ಕೋವಿಡ್–19ಗೆ ಚಿಕಿತ್ಸೆ ಪಡೆಯುತ್ತಿದ್ದರು.
ಸ್ಪೆಷಲ್ ಸಬ್ ಇನ್‌ಸ್ಪೆಕ್ಟರ್ (ಎಸ್‌ಎಸ್‌ಐ) ಪಾಲ್‌ದುರೈ (56) ಇಲ್ಲಿನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಕೊನೆಯುಸಿರಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿ.ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಅವರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ 10 ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಜೂನ್‌ನಲ್ಲಿ ತೂತ್ತುಕುಡಿ ಜಿಲ್ಲೆಯ ಸಾತನ್‌ಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿತ್ತು.
ಕೇಂದ್ರ ಕಾರಾಗೃಹದಲ್ಲಿದ್ದ ಎಸ್‌ಎಸ್‌ಐ ಅವರನ್ನು, ಕಳೆದ ತಿಂಗಳು ಸೋಂಕು ಪತ್ತೆಯಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಂದೆ– ಮಗನ ಸಾವಿನ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳುನಾಡು ಸರ್ಕಾರ ಪ‍್ರಕರಣವನ್ನು ಸಿಬಿಐಗೆ ವಹಿಸಿತ್ತು. ಜಯರಾಜ್– ಬೆನಿಕ್ಸ್ ಮೊಬೈಲ್ ಮಾರಾಟ ಮಳಿಗೆ ಹೊಂದಿದ್ದರು.
ತಮ್ಮ ಪತಿಯನ್ನು ಚಿಕಿತ್ಸೆಗಾಗಿ ಕನ್ಯಾಕುಮಾರಿಯ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ಪಾಲ್‌ದುರೈ ಅವರ ಪತ್ನಿ ನಗರದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.