ನವದೆಹಲಿ: ಆಗಸ್ಟ್ 15ರಂದು ನಡೆಯಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಐತಿಹಾಸಿಕ ಕೆಂಪು ಕೋಟೆಯು ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆಯ ಕಾರ್ಯಕ್ರಮಗಳು ನಡೆಯಲಿವೆ.
ದೇಶದಾದ್ಯಂತ ವಿವಿಧ ವೃತ್ತಿಗಳ ಸುಮಾರು 1,800 ಜನರನ್ನು ‘ವಿಶೇಷ ಅತಿಥಿ’ಗಳನ್ನಾಗಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಕೆಂಪು ಕೋಟೆಗೆ ಬರುವ ಪ್ರಧಾನಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ಬರಮಾಡಿಕೊಳ್ಳಲಿದ್ದಾರೆ. ಮೋದಿ ಅವರು ರಾಷ್ಟ್ರ ಧ್ವಜಾರೋಹಣ ಮಾಡಿ ಬಳಿಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವರು’ ಎಂದು ರಕ್ಷಣಾ ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ 2021ರ ಮಾರ್ಚ್ 12ರಂದು ಪ್ರಧಾನಿ ಅವರು ಚಾಲನೆ ನೀಡಿದ ‘ಸ್ವಾತಂತ್ರ್ಯೋತ್ಸವದ ಅಮೃತದ ಮಹೋತ್ಸವ’ವು ಇದೇ ಆಗಸ್ಟ್ 15ಕ್ಕೆ ಮುಕ್ತಾಯವಾಗಲಿದ್ದು, ಅದನ್ನು ‘ಅಮೃತ ಕಾಲ’ ಎನ್ನುವ ಹೆಸರಿನಲ್ಲಿ ನವೀಕರಿಸಿ, 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ರೂಪಿಸುವ ಹುರುಪು ತುಂಬುವ ಕಾರ್ಯವೂ ನಡೆಯಲಿದೆ ಎಂದೂ ಸಚಿವಾಲಯವು ಹೇಳಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ‘ಜನ ಭಾಗಿದಾರಿ’ ಎನ್ನುವ ದೃಷ್ಟಿಗೆ ಅನುಗುಣವಾಗಿ ಈ ಬಾರಿ 1,800 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಈ ಅತಿಥಿಗಳಲ್ಲಿ ದೇಶದ ಸುಮಾರು 660ಕ್ಕೂ ಹೆಚ್ಚಿನ ಗ್ರಾಮದವರಿದ್ದಾರೆ. ಇವುಗಳಲ್ಲಿ 400ಕ್ಕೂ ಹೆಚ್ಚು ಸರಪಂಚರನ್ನು ಆಹ್ವಾನಿಸಲಾಗಿದೆ. ಅಂತೆಯೇ ರೈತ ಉತ್ಪಾದಕ ಸಂಸ್ಥೆಗಳಿಂದ 250, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಿಂದ ತಲಾ 50 ಮಂದಿ ಹಾಗೂ ಸಂಸತ್ತಿನ ಹೊಸ ಕಟ್ಟಡ ಸೇರಿದಂತೆ ಕೇಂದ್ರ ವಿಸ್ತಾ ಯೋಜನೆಯ 50 ನಿರ್ಮಾಣ ಕಾರ್ಮಿಕರು, ಖಾದಿ ಘಟಕಗಳ 50 ಕಾರ್ಮಿಕರು, ಅಮೃತ ಸರೋವರ ಹಾಗೂ ಹರ್ ಘರ್ ಜಲ್ ಯೋಜನೆ ಹಾಗೂ ರಸ್ತೆ ನಿರ್ಮಾಣದ 50 ಕಾರ್ಮಿಕರು, ಪ್ರಾಥಮಿಕ ಶಾಲಾ ಶಿಕ್ಷಕರು, ನರ್ಸ್‌ಗಳು ಮತ್ತು ಮೀನುಗಾರರು ವಿಶೇಷ ಅತಿಥಿಗಳಲ್ಲಿ ಸ್ಥಾನ ಪಡೆದಿದ್ದಾರೆ.
‘ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಎಪ್ಪತ್ತೈದು ಜೋಡಿಗಳನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ, ಕೆಂಪು ಕೋಟೆಯಲ್ಲಿ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ. ಆಹ್ವಾನಿತ ‘ವಿಶೇಷ ಅತಿಥಿಗಳು’ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಮತ್ತು ರಕ್ಷಣಾ ರಾಜ್ಯ ಸಚಿವ ಅಜಯ್ ಭಟ್ ಅವರನ್ನು ಭೇಟಿ ಮಾಡಿಸಲು ನಿರ್ಧರಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ.
ಸರ್ಕಾರ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್, ವಿಜಯ್ ಚೌಕ, ನವದೆಹಲಿ ರೈಲ್ವೆ ನಿಲ್ದಾಣ, ಪ್ರಗತಿ ಮೈದಾನ, ರಾಜ್ ಘಾಟ್, ಜಮಾ ಮಸೀದಿ ಮೆಟ್ರೊ ನಿಲ್ದಾಣ, ರಾಜೀವ್ ಚೌಕ್ ಮೆಟ್ರೊ ನಿಲ್ದಾಣ, ದೆಹಲಿ ಗೇಟ್ ಮೆಟ್ರೊ ನಿಲ್ದಾಣ, ಐಟಿಒ ಮೆಟ್ರೊ ಗೇಟ್, ನೌಬತ್ ಖಾನಾ ಮತ್ತು ಶೀಶ್ ಗಂಜ್ ಗುರುದ್ವಾರಗಳಲ್ಲಿ ‘ಸೆಲ್ಫಿ ಪಾಯಿಂಟ್ಸ್’ ಅನ್ನು ಸ್ಥಾಪಿಸಲಾಗಿದೆ ಎಂದೂ ತಿಳಿಸಿದೆ.
ಸ್ವಾತಂತ್ರ್ಯೋತ್ಸವ ಆಚರಣೆಯ ಭಾಗವಾಗಿ ರಕ್ಷಣಾ ಸಚಿವಾಲಯವು mygov ಪೋರ್ಟಲ್‌ನಲ್ಲಿ ಆಗಸ್ಟ್ 15ರಿಂದ 20ರವರೆಗೆ ಆನ್‌ಲೈನ್ ಸೆಲ್ಫಿ ಸ್ಪರ್ಧೆಯನ್ನು ನಡೆಸಲಿದೆ. ಈಗಾಗಲೇ ಎಲ್ಲಾ ಅಧಿಕೃತ ಆಹ್ವಾನಗಳನ್ನು ಆಮಂತ್ರಣ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಕಳುಹಿಸಲಾಗಿದೆ. 17 ಸಾವಿರ ಇ–ಆಮಂತ್ರಣ ಪತ್ರಿಕೆಗಳನ್ನು ಪೋರ್ಟಲ್ ಮೂಲಕ ನೀಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ನವದೆಹಲಿ
77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 14ರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ರಾಷ್ಟ್ರಭವನದ ಮೂಲಗಳು ಭಾನುವಾರ ತಿಳಿಸಿವೆ. ‘ರಾಷ್ಟ್ರಪತಿ ಅವರ ಭಾಷಣವು ಆ. 14ರ ಸಂಜೆ 7 ಗಂಟೆಗೆ ದೇಶದಾದ್ಯಂತ ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಬಳಿಕ ರಾತ್ರಿ 9.30ರ ವೇಳೆಗೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿದೆ’ ಎಂದೂ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.