ಕೋಲ್ಕತ್ತ: ಮಾತುಕತೆಗೆ ಬರುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಆಹ್ವಾನವನ್ನು ಮುಷ್ಕರ ನಿರತ ಕಿರಿಯ ವೈದ್ಯರು ತಿರಸ್ಕರಿಸಿದ್ದು, ವೈದ್ಯರು ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ಶನಿವಾರವೂ ಮುಂದುವರಿಯಿತು.
ಆದರೆ, ಸಂಜೆಯ ವೇಳೆಗೆ ವೈದ್ಯರನ್ನು ಕುರಿತ ತಮ್ಮ ನಿಲುವನ್ನು ಬದಲಿಸಿದ ಮಮತಾ, ‘ವೈದ್ಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅವರ ವಿರುದ್ಧ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಗೊಳಿಸುವುದಿಲ್ಲ. ಎಲ್ಲರೂ ಸೇವೆಗೆ ಮರಳಬೇಕು’ ಎಂದು ಮನವಿ ಮಾಡಿಕೊಂಡರು.
‘ಈಗಾಗಲೇ ಐದು ದಿನ ಕಳೆದಿವೆ. ಚಿಕಿತ್ಸೆ ಪಡೆಯಲು ಬಡ ರೋಗಿಗಳು ಎಲ್ಲಿಗೆ ಹೋಗಬೇಕು. ಅವರ ಸಂಕಷ್ಟವನ್ನು ಮನಗಂಡು ವೈದ್ಯರು ಸೇವೆಗೆ ಮರಳಬೇಕು’ ಎಂದು ಮಮತಾ ಮನವಿ ಮಾಡಿದರು.
ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಮಾತುಕತೆಗೆ ಬರುವಂತೆ ಶುಕ್ರವಾರ ರಾತ್ರಿ ಮಮತಾ ಅವರು ವೈದ್ಯರಿಗೆ ಆಹ್ವಾನ ನೀಡಿದ್ದರು. ಆದರೆ ಅದನ್ನು ವೈದ್ಯರು ತಿರಸ್ಕರಿಸಿ, ‘ಮುಖ್ಯಮಂತ್ರಿ ಅವರೇ ಪ್ರತಿಭಟನಾ ಸ್ಥಳಕ್ಕೆ ಬರಬೇಕು’ ಎಂದು ಹಠ ಹಿಡಿದಿದ್ದರು. ವೈದ್ಯರ ಈ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮಮತಾ, ‘ಪ್ರತಿಭಟನಾ ಸ್ಥಳಕ್ಕೆ ಹೋಗುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಮಮತಾ, ‘ನಾನು ಮಾತುಕತೆಗೆ ಆಹ್ವಾನಿಸಿದಾಗ ನೀವು ನಿರಾಕರಿಸುತ್ತೀರಿ. ಸರ್ಕಾರ ಎಲ್ಲಿ ಕುಳಿತು ಚರ್ಚೆ ಮಾಡಬೇಕು ಎಂಬುದನ್ನು ನೀವು ನಿರ್ಧರಿಸುತ್ತೀರಾ? ಮಾತುಕತೆ ನಡೆಸಲು ರಾಜ್ಯ ಸಚಿವಾಲಯ ಸೂಕ್ತ ಸ್ಥಳ ಎಂದು ನಿಮಗೆ ಅನ್ನಿಸುವುದಿಲ್ಲವೇ?’ ಎಂದು ಮಮತಾ ಪ್ರಶ್ನಿಸಿದರು.
ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವೈದ್ಯರು ಮುಷ್ಕರ ನಡೆಸಿದ್ದಾಗ ಅವರ ವಿರುದ್ಧ ಎಸ್ಮಾ ಪ್ರಯೋಗಿಸಲಾಗಿತ್ತು ಎಂದ ಅವರು, ರಾಜ್ಯ ಸರ್ಕಾರ ಮುಷ್ಕರ ನಿರತ ವೈದ್ಯರ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದರು.
ರಾಜ್ಯಗಳಿಗೆ ಕೇಂದ್ರದ ಪತ್ರ: ಈ ಮಧ್ಯೆ, ‘ಕರ್ತವ್ಯ ನಿರತ ವೈದ್ಯರಿಗೆ ರಕ್ಷಣೆ ನೀಡಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಎರಡು ವರ್ಷದ ಹಿಂದೆ ನೀಡಿದ್ದ ಸಲಹೆಯನ್ನು ಜಾರಿಗೆ ತರಲು ರಾಜ್ಯಗಳು ಒತ್ತು ನೀಡಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.
ಹಿಂದೆ ಭಾರತೀಯ ವೈದ್ಯಕೀಯ ಸಂಸ್ಥೆ ರೂಪಿಸಿದ್ದ ಕರಡು ಮಸೂದೆ, ‘ವೈದ್ಯಕೀಯ ಸೇವಾ ಸಿಬ್ಬಂದಿ ಮತ್ತು ಸಂಸ್ಥೆಗಳ ರಕ್ಷಣೆ (ಹಿಂಸೆ ಮತ್ತು ಆಸ್ತಿ ಹಾನಿ ತಡೆ) ಕಾಯ್ದೆ 2017’ ಕುರಿತ ಪ್ರತಿಗಳನ್ನೂ ರಾಜ್ಯಗಳಿಗೆ ಕೇಂದ್ರ ಕಳುಹಿಸಿದೆ.
ಮುಷ್ಕರ ಕುರಿತು ವರದಿಗೆ ಕೇಂದ್ರ ಸೂಚನೆ
ವೈದ್ಯರ ಮುಷ್ಕರ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಶನಿವಾರ ಪಶ್ಚಿಮ ಬಂಗಾಳ ಸರ್ಕಾರವನ್ನು ಕೋರಿದೆ. ಅಲ್ಲದೆ, ಕಳೆದ ನಾಲ್ಕು ವರ್ಷಗಳಲ್ಲಿ 160 ಜನರ ಬಲಿ ಪಡೆದಿರುವ ರಾಜಕೀಯ ಹಿಂಸಾಚಾರ ಕುರಿತೂ ವರದಿ ಕೇಳಿದೆ.
ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ, ‘ವೈದ್ಯರ ಮುಷ್ಕರ ಕುರಿತು ಶೀಘ್ರ ವರದಿ ಸಲ್ಲಿಸಬೇಕು. ತಮ್ಮ ಸುರಕ್ಷತೆ ಕುರಿತು ಆಂತಕ ವ್ಯಕ್ತಪಡಿಸಿ ವೈದ್ಯರು, ಆರೋಗ್ಯ ಸೇವಾ ಸಂಸ್ಥೆಗಳು, ವೈದ್ಯರ ಸಂಘಗಳಿಂದ ನಮಗೆ ಮನವಿ ಪತ್ರಗಳು ಬಂದಿವೆ’ ಎಂದು ತಿಳಿಸಿದೆ.
‘2016ರ ನಂತರ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಜನರಲ್ಲಿ ಅಭದ್ರತೆ ಭಾವ ಮೂಡಿದೆ’ ಎಂದು ಗೃಹಸಚಿವಾಲಯದ ಇನ್ನೊಂದು ಪತ್ರದಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ರಾಜಕೀಯ ಹಿಂಸೆಗೆ 2016ರಲ್ಲಿ 509 ಜನರು ಸತ್ತಿದ್ದರೆ, 2018ರಲ್ಲಿ 1,035 ಜನರು ಸತ್ತಿದ್ದಾರೆ. 2019ರಲ್ಲಿಯೇ 773 ಪ್ರಕರಣಗಳು ನಡೆದಿದ್ದು, ಈವರೆಗೂ 26 ಜನರು ಸತ್ತಿದ್ದಾರೆ’ ಎಂಬುದನ್ನು ಗೃಹ ಸಚಿವಾಲಯ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.