ತಿರುಪತಿ: ದಕ್ಷಿಣ ಭಾರತದ ರಾಜ್ಯಗಳಲ್ಲಿನ ಸಾಂಸ್ಕೃತಿಕ, ಆಹಾರ, ಹವಾಗುಣದ ಸಾಮ್ಯತೆಯನ್ನು ಉಲ್ಲೇಖಿಸುತ್ತಾ ಮಾತನಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ಇಲ್ಲಿನ ಸಂಪನ್ಮೂಲಗಳನ್ನು ವಿವೇಚನಾಯುಕ್ತ ರೀತಿಯಲ್ಲಿ ಬಳಸಿಕೊಳ್ಳಲು ಎಲ್ಲರೂ ಒಟ್ಟಾಗುವ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ನೆರೆಹೊರೆಯ ರಾಜ್ಯಗಳನ್ನು ಉದ್ದೇಶಿಸಿ ಮಾತನಾಡಿರುವ ಸ್ಟಾಲಿನ್, ‘ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಎಲ್ಲರನ್ನೂ ಒಳಗೊಳ್ಳುವಿಕೆಯ ನಮ್ಮ ನೀತಿಯಲ್ಲೇ ನಾವು ಬೆಳೆದಿದ್ದೇವೆ. ನಮ್ಮ ಆಹಾರ ಪದ್ಧತಿ ಒಂದೇ. ಹವಾಮಾನ ಮತ್ತು ಪರಸ್ಪರರ ನಡುವೆ ಹಂಚಿಕೆಯಾಗಿರುವ ಮೌಲ್ಯಗಳು ಒಂದೇ,’ ಎಂದು ಅವರು ಹೇಳಿದ್ದಾರೆ.
‘ನಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ವಿವೇಚನಾಶೀಲವಾಗಿ ಬಳಸಿಕೊಳ್ಳಲು ನಮ್ಮ ನಡುವೆ ಒಗ್ಗಟ್ಟು ಮುಖ್ಯ. ಅನಗತ್ಯ ದಾವೆಗಳು ಮತ್ತು ಅನಗತ್ಯ ಘರ್ಷಣೆಗಳು ನಮ್ಮ ಪ್ರಗತಿಗೆ ಅಡ್ಡಿಯಾಗುವ ಅನಗತ್ಯ ದ್ವೇಷವನ್ನು ಉಂಟುಮಾಡುತ್ತವೆ. ಪ್ರೀತಿಯೆಂಬ ಸಾರ್ವತ್ರಿಕ ಭಾಷೆಯು ಎಲ್ಲಾ ಸಮಸ್ಯೆಗಳನ್ನು ಕರಗಿಸಿ ನಮ್ಮನ್ನು ಮುನ್ನಡೆಸುತ್ತದೆ. ಒಗ್ಗಟ್ಟಾಗಿದ್ದರೆ ಪ್ರಗತಿಯ ಹಾದಿಯಲ್ಲಿ ಸಾಗಬಹುದು,’ ಎಂದು ಅವರು ತಿಳಿಸಿದರು.
ಶಾಸ್ತ್ರೀಯ ಭಾಷೆಯಾಗಿರುವ ತಮಿಳು ವಿಶ್ವದ ಅತ್ಯಂತ ಹಳೆಯ ಮತ್ತು ಶ್ರೀಮಂತ ಭಾಷೆಗಳಲ್ಲಿ ಒಂದಾಗಿರುವುದರಿಂದ ಅದನ್ನು ದೇಶದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಶ್ರೀಲಂಕಾ ಮತ್ತು ಸಿಂಗಾಪುರದಲ್ಲಿ ತಮಿಳು ಈಗಾಗಲೇ ರಾಷ್ಟ್ರೀಯ ಭಾಷೆಯಾಗಿದೆ. ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅಲ್ಪಸಂಖ್ಯಾತ ಭಾಷೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ತಮಿಳು ಸಾಹಿತ್ಯದ ಪದ್ಯಗಳನ್ನು ಉಲ್ಲೇಖಿಸಲು ಎಂದಿಗೂ ಮರೆಯುವುದಿಲ್ಲ,’ ಎಂದೂ ಸ್ಟಾಲಿನ್ ಹೇಳಿದರು.
‘ ಜಾತ್ಯತೀತತೆಯನ್ನು ಸಾರುವ ತಿರುಕ್ಕುರಳ್ ಅನ್ನು ರಾಷ್ಟ್ರೀಯ ಪುಸ್ತಕವಾಗಿ ಘೋಷಿಸಲು ನಾವು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇವೆ,‘ ಎಂದು ಅವರು ಹೇಳಿದರು.
ತಮಿಳುನಾಡು ಯಾವಾಗಲೂ ರಾಜ್ಯಗಳ ಹಕ್ಕುಗಳು ಮತ್ತು ಅವುಗಳ ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತದೆ. ಸಮಾನತೆಗೆ ಒತ್ತು ನೀಡುತ್ತದೆ. ಬಲವಾದ ದೇಶಭಕ್ತಿಯ, ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಡುತ್ತದೆ,‘ ಎಂದು ಅವರು ತಿಳಿಸಿದರು.
ಬಹುಸಂಸ್ಕೃತಿ ಮತ್ತು ಅನಾದಿ ಕಾಲದಿಂದಲೂ ಪಾಲನೆಯಾಗುತ್ತಿರುವ ‘ಎಲ್ಲರನ್ನೂ ಒಳಗೊಳ್ಳುವಿಕೆ’ಯಲ್ಲಿ ಭಾರತದ ಸೌಂದರ್ಯ ಅಡಗಿದೆ ಎಂದು ತಮಿಳುನಾಡು ಬಲವಾಗಿ ನಂಬಿರುವುದಾಗಿ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.