ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರಿಗೆ ಕೃಷಿ ಬಗ್ಗೆ ಏನೂ ಗೊತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ, ಎಐಎಡಿಎಂಕೆ ಹಿರಿಯ ನಾಯಕ ಎಡಪ್ಪಾಡಿ ಪಳನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚುನಾವಣೆಯ ಕಾರಣಕ್ಕಾಗಿ ಡಿಎಂಕೆಯು ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದೆ. ಅವರಿಗೆ (ಸ್ಟಾಲಿನ್) ಕೃಷಿ ಬಗ್ಗೆ ಏನೂ ಗೊತ್ತಿಲ್ಲ. ರೈತರಿಗೆ ತೊಂದರೆಯಾಗುವಂತಹ ಯಾವುದೇ ಕ್ರಮವನ್ನು ಮೊದಲು ವಿರೋಧಿಸಿದ ಪಕ್ಷ ಎಐಎಡಿಎಂಕೆ ಎಂದು ಅವರು ಹೇಳಿದ್ದಾರೆ.
ಕುರಿಂಜಿಪಾಡಿ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಸೆಲ್ವಿ ರಾಮಜಯಂ ಪರ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಪಳನಿಸ್ವಾಮಿ, ‘ರೈತರಿಗೆ ತೆರಿಗೆ ವಿಧಿಸುವಂತಹ ವಿಷಯಗಳನ್ನು ಎಐಎಡಿಎಂಕೆ ವಿರೋಧಿಸಿದೆ. ಆದರೆ ಡಿಎಂಕೆ ಬೆಂಬಲಿಸಿತ್ತು’ ಎಂದು ಹೇಳಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಉತ್ತರ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮಧ್ಯವರ್ತಿಗಳ ಪ್ರಚೋದನೆಯಿಂದ ಕೂಡಿದ್ದು ಎಂದೂ ಅವರು ಹೇಳಿದ್ದಾರೆ.
ಟೊಮ್ಯಾಟೊ ಬಿತ್ತನೆ ವೇಳೆ ಅದರ ಮಾರುಕಟ್ಟೆ ದರ ಪ್ರತಿ ಕೆಜಿಗೆ ₹40 ಇರಬಹುದು. ಹಾಗೆಂದು ಕಟಾವಿನ ಸಮಯದಲ್ಲಿ ಅದರ ಬೆಲೆ ₹2 ಅಥವಾ ₹3ಕ್ಕೆ ಇಳಿಕೆಯಾಗಬಹುದು. ಇಂಥ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಬೆಲೆಯಲ್ಲೇ ಕೃಷಿ ಉತ್ಪನ್ನಗಳನ್ನು ಖರೀದಿಸಲು ಹೊಸ ಕಾನೂನುಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಕೃಷಿ ಉತ್ಪನ್ನಗಳು ಹೆಚ್ಚಿನ ದರಕ್ಕೆ ಮಾರಾಟವಾದರೆ ಅದರಲ್ಲಿ ರೈತರಿಗೂ ಪಾಲು ದೊರೆಯಲಿದೆ. ಇದರಲ್ಲಿ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.