ADVERTISEMENT

ಇದೊಂದು ಬಾರಿ ‘ಅಪ್ಪಾ’ ಎನ್ನಲೇ?

ಅಪ್ಪಣೆ ಕೇಳಿದ ಮಗ l ಸಾವಿನ ಮನೆಯಲ್ಲಿ ಅರಳಿದ ಕವನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 17:38 IST
Last Updated 8 ಆಗಸ್ಟ್ 2018, 17:38 IST
ಮಗನಿಗೆ ಅಪ್ಪನ ಸಿಹಿ ಮುತ್ತು
ಮಗನಿಗೆ ಅಪ್ಪನ ಸಿಹಿ ಮುತ್ತು   

ಚೆನ್ನೈ: ‘ನಾನು ನಿಮ್ಮನ್ನು ಇದೊಂದು ಬಾರಿ ‘ಅಪ್ಪ’ ಎಂದು ಕರೆಯಲೇ?’

– ಹೀಗೆಂದು ಎಂ. ಕರುಣಾನಿಧಿ ಅವರ ಅಪ್ಪಣೆಯನ್ನು ಕೇಳಿದವರು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌.

ಮಂಗಳವಾರ ಕೊನೆಯುಸಿರೆಳೆದ ತಮ್ಮ ತಂದೆ ಕರುಣಾನಿಧಿ ಅವರನ್ನು ಕುರಿತು ಬರೆದ ಕವನದಲ್ಲಿ ಸ್ಟಾಲಿನ್‌ ಮನದಾಳದ ನೋವಿಗೆ ಅಕ್ಷರ ರೂಪಕೊಟ್ಟಿದ್ದಾರೆ.

ADVERTISEMENT

ಸ್ಟಾಲಿನ್‌ ತಮ್ಮ ತಂದೆಯನ್ನು ಯಾವಾಗಲೂ ‘ತಲೈವರ್‌’ (ನಾಯಕರು) ಎಂದೇ ಸಂಬೋಧಿಸುತ್ತಿದ್ದರು.

ತಮಿಳು ಭಾಷೆಯಲ್ಲಿರುವ ಈ ಕವನ ಅಪ್ಪ–ಮಗನ ನಡುವಣ ಸಂಬಂಧ, ಪ್ರೀತಿ, ಅವ್ಯಕ್ತ ಭಯ, ಗೌರವ ಮುಂತಾದ ಸೂಕ್ಷ್ಮಗಳನ್ನು ತೆರೆದಿಡುತ್ತದೆ.

‘ನಾನು ನಿಮ್ಮನ್ನು ಅಪ್ಪ ಎಂದು ಕರೆದುದಕ್ಕಿಂತ ‘ತಲೈವರ್‌, ತಲೈವರ್‌’ ಎಂದು ಕರೆದದ್ದೇ ಹೆಚ್ಚು. ಕೊನೆಯ ಬಾರಿ ಒಂದೇ ಒಂದು ಸಾರಿ ‘ಅಪ್ಪ’ ಎಂದು ಕರೆಯಲೇ ತಲೈವರೇ’ ಎಂದು ಅಪ್ಪಣೆ ಕೇಳಿದ್ದಾರೆ.

ಕರುಣಾನಿಧಿ ಅವರು ಕೊನೆಯುಸಿರೆಳೆದ ಕೆಲವು ಗಂಟೆಗಳಲ್ಲಿ ಸ್ಟಾಲಿನ್‌ ಪೆನ್ನಿನಿಂದ ಈ ಕಾವ್ಯ ಮೂಡಿಬಂದಿದೆ.

ಎಲ್ಲಿಗೆ ಹೋದಿರಿ ತಲೈವರ್‌!:‘ಪ್ರತಿ ಬಾರಿ ಎಲ್ಲಿಗೇ ಹೋಗಬೇಕಾದರೂ ನನಗೆ ಹೇಳಿಯೇ ಹೋಗುವುದು ರೂಢಿ. ಆದರೆ, ಈ ಬಾರಿ ಮಾತ್ರ ಏಕೆ ಹೇಳದೆ, ಕೇಳದೆ ಹೋದಿರಿ ತಲೈವರ್‌!’ ಎಂದು ಸ್ಟಾಲಿನ್‌ ತಮ್ಮ ತಂದೆಯನ್ನು ಪ್ರಶ್ನಿಸಿದ್ದಾರೆ.

‘ತಲೈವರ್‌, ನೀವು ನಮ್ಮ ಉಸಿರು, ವಿಚಾರದಲ್ಲಿ ಬೆರೆತು ಹೋಗಿದ್ದೀರಿ. ನಮ್ಮನ್ನು ಅನಾಥರನ್ನಾಗಿ ಬಿಟ್ಟು ಎಲ್ಲಿಗೆ ಹೊರಟು ಹೋದಿರಿ’ ಎಂದು ಕೇಳಿದ್ದಾರೆ.

ಭಾಷಣ ಆರಂಭಿಸುವ ಮುನ್ನ ನೀವು ಹೇಳುತ್ತಿದ್ದ ‘ಎನ್‌ ಅಂಬು ಉಡನ್‌ಪಿರಪ್ಪುಕ್ಕಳೇ (ನನ್ನ ಪ್ರೀತಿಯ ಸಹೋದರರೇ)’ ಎಂಬ ವಾಕ್ಯ ತಮಿಳಿಗರ ಬಾಯಿಗಳಲ್ಲಿ ಪ್ರತಿಧ್ವನಿಸುತ್ತಿದೆ ಎಂದು ಸ್ಟಾಲಿನ್‌ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.