ADVERTISEMENT

ನಮ್ಮ ಗಂಟಲೊಳಗೆ 'ಹಿಂದಿ' ತುರುಕಿಸುವ ವ್ಯರ್ಥ ಪ್ರಯತ್ನ ಬಿಡಿ: ಸ್ಟಾಲಿನ್

ಪಿಟಿಐ
Published 12 ಜೂನ್ 2023, 14:18 IST
Last Updated 12 ಜೂನ್ 2023, 14:18 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್   

ಚೆನೈ: ಹಿಂದಿ ಹೇರಿಕೆಯನ್ನು ತಡೆಯಲು ಡಿಎಂಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದರು.

ಹಿಂದಿ ಅನುಷ್ಠಾನದ ಕುರಿತು 'ನ್ಯೂ ಇಂಡಿಯಾ ಅಶ್ಯೂರೆನ್ಸ್‌' ಸಾರ್ವಜನಿಕ ವಲಯದ ಸಂಸ್ಥೆ ಸುತ್ತೋಲೆ ಹೊರಡಿಸಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸ್ಟಾಲಿನ್‌, ಇದು 'ಅನ್ಯಾಯ' ಎಂದು ಕರೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸ್ಟಾಲಿನ್‌, 'ದೇಶದ ಅಭಿವೃದ್ದಿಗಾಗಿ ದೇಶದ ಪ್ರತಿಯೊಬ್ಬ ನಾಗರಿಕರು ತನ್ನದೇ ಆದ ಕಾಣಿಕೆ ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ಹಿಂದಿಯನ್ನು ಮುಂದೆ ಮಾಡಿ ದೇಶದ ಇತರ ಭಾಷೆಗಳನ್ನು ಕಡೆಗಣಿಸುತ್ತಿವೆ' ಎಂದು ಕಿಡಿಕಾರಿದರು.

ADVERTISEMENT

'ಕೇಂದ್ರ ಸರ್ಕಾರ ಕಲ್ಯಾಣ ಕಾರ್ಯಗಳನ್ನು ಮಾಡುವ ಬದಲು ನಮ್ಮ ಗಂಟಲೊಳಗೆ ಹಿಂದಿ ತುರುಕಿಸುವ ವ್ಯರ್ಥ ಪ್ರಯತ್ನ ಮಾಡಿ ಸಮಯ ಹಾಳು ಮಾಡುತ್ತಿದೆ. ಇದರ ಇನ್ನೊಂದು ರೂಪವೇ ಈಗ ಬಂದಿರುವ ಸುತ್ತೋಲೆ. ಈ ಸುತ್ತೋಲೆಯನ್ನು ತಕ್ಷಣವೇ ಹಿಂಪಡೆಯಬೇಕು. ಸಂಸ್ಥೆಯ ಅಧ್ಯಕ್ಷೆ ನಿರಜಾ ಕಪೂರ್ ಭಾರತದ ಹಿಂದಿಯೇತರ ಭಾಷಿಕರ ಬಳಿ ಕ್ಷಮೆಯಾಚಿಸಬೇಕು' ಎಂದು ಹೇಳಿದ್ದಾರೆ.

'ಹಿಂದಿನಿಂದಲೂ ಹಿಂದಿಯೇತರ ಜನರನ್ನು ಭಾರತದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣಲಾಗುತ್ತಿದೆ. ಇಂತಹದನ್ನೆಲ್ಲ ಸಹಿಸಿಕೊಳ್ಳುವ ದಿನಗಳು ಹೊರಟು ಹೋಗಿವೆ. ತಮಿಳುನಾಡು ಸರ್ಕಾರ ಹಿಂದಿ ಹೇರಿಕೆಯನ್ನು ತಡೆಯಲು ತನ್ನ ಶಕ್ತಿ ಮೀರಿ ಶ್ರಮಿಸುತ್ತದೆ. ಮುಂದಿನ ದಿನಗಳಲ್ಲಿ ರೈಲ್ವೇ, ಅಂಚೆ ಇಲಾಖೆ, ಬ್ಯಾಂಕಿಂಗ್ ಮತ್ತು ಸಂಸತ್ತು ಎಲ್ಲ ಕಡೆಯಲ್ಲೂ ಹಿಂದಿ ಭಾಷಿಕರಿಗಿರುವ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕುತ್ತೇವೆ' ಎಂದರು.

'ನಾವು ನಮ್ಮ ತೆರಿಗೆಯನ್ನು ಪಾವತಿಸುತ್ತೇವೆ. ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇವೆ. ದೇಶದ ಪರಂಪರೆಯನ್ನು ಗೌರವಿಸುತ್ತೇವೆ. ದೇಶದ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತೇವೆ. ಎಲ್ಲ ಭಾಷೆಯಂತೆ ನಮ್ಮ ಭಾಷೆಗೂ ಸಮಾನ ಸ್ಥಾನಮಾನ ಸಿಗಬೇಕು ಎಂದು ಬಯಸುತ್ತೇವೆ. ನಮ್ಮ ನೆಲದಲ್ಲಿ ತಮಿಳು ಭಾಷೆಯನ್ನು ಬದಲಾಯಿಸಲು ಬಂದರೆ ನಾವು ಅದನ್ನು ಕಟುವಾಗಿ ವಿರೋಧಿಸುತ್ತೇವೆ' ಎಂದು ಹೇಳಿದರು.

ಸ್ಟಾಲಿನ್ ಟ್ವೀಟ್‌ ಪ್ರತಿಕ್ರಿಯೆ ನೀಡಿರವ ನ್ಯಾಷನಲ್‌ ಅಶ್ಯೂರೆನ್ಸ್ ಕಂಪೆನಿ, 'ಎಲ್ಲ ಭಾಷೆಗಳನ್ನು ಗೌರವಿಸುವುದಾಗಿ' ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.