ಚೆನ್ನೈ: ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ರಾಜ್ಯದಲ್ಲಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಡಿಎಂಕೆ ಹೊಸ ಸಾರಥಿ ಎಂ.ಕೆ.ಸ್ಟಾಲಿನ್ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಮಂಗಳವಾರ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪದಗ್ರಹಣ ಸಮಾರಂಭದಲ್ಲಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
‘ಮೋದಿ ಸರ್ಕಾರ ದೇಶವನ್ನು ಕೇಸರಿಕರಣ ಮಾಡಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ರಾಜ್ಯಪಾಲರ ನೇಮಕ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲೇಬೇಕು. ರಾಜ್ಯದ ಪರ ಗಟ್ಟಿ ನಿಲುವು ಹೊಂದಿರದ ದುರ್ಬಲ ಎಐಎಡಿಎಂಕೆ ನೇತೃತ್ವದ ರಾಜ್ಯ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಕರೆ ನೀಡಿದರು.
‘ಧರ್ಮ, ಸಾಹಿತ್ಯ, ಕಲೆ, ಶಿಕ್ಷಣ ಹಾಗೂ ಜನರ ಸ್ವಾಭಿಮಾನದ ಮೇಲೆ ಕೋಮುಶಕ್ತಿಗಳು ದಾಳಿ ನಡೆಸುತ್ತಿವೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಇವುಗಳನ್ನು ಎದುರಿಸುವ ದೊಡ್ಡ ಸವಾಲು ನಮ್ಮ ಮುಂದಿದೆ. ದ್ರಾವಿಡ ಚಳವಳಿಗಾರರಾದ ಇ.ವಿ.ರಾಮಸಾಮಿ ಪೆರಿಯಾರ್ ಮತ್ತು ಸಿ.ಎನ್.ಅಣ್ಣಾದೊರೈ ಅವರ ಸಿದ್ಧಾಂತಗಳನ್ನು ಪಕ್ಷ ಎಂದಿಗೂ ತ್ಯಜಿಸುವುದಿಲ್ಲ. ರಾಜ್ಯದ ಜನರ ಏಳಿಗಾಗಿ ಪಕ್ಷ ಎಲ್ಲ ರೀತಿಯ ಹೋರಾಟ ನಡೆಸಲಿದೆ’ ಎಂದು ಹೇಳಿದರು.
ನಂತರ ಸ್ಟಾಲಿನ್ ಅವರು ಮರೀನಾ ಬೀಚ್‌ಗೆ ತೆರಳಿ ತಮ್ಮ ತಂದೆ ಕರುಣಾನಿಧಿ ಮತ್ತು ಪಕ್ಷದ ಸ್ಥಾಪಕ ಅಣ್ಣಾದೊರೈ ಸಮಾಧಿಗಳಿಗೆ ನಮನ ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಸ್ಟಾಲಿನ್ ಅವರನ್ನು ಅಭಿನಂದಿಸಿ, ಟ್ವೀಟ್ ಮಾಡಿದ್ದಾರೆ.
**
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.