ಚೆನ್ನೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆದರಿಕೆ ಹಾಕಿರುವ ಕುರಿತು ಆಘಾತ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಸುರಕ್ಷತೆಯ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಖಚಿತಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ‘ತನ್ನ ಅಜ್ಜಿಗೆ ಬಂದ ಸ್ಥಿತಿಯೇ ರಾಹುಲ್ ಗಾಂಧಿಗೆ ಬರಲಿದೆ, ಅವರ ನಾಲಿಗೆ ಕತ್ತರಿಸುತ್ತೇನೆ ಎಂದು ಶಿವಸೇನಾ ಶಿಂದೆ ಬಣದ ಶಾಸಕರೊಬ್ಬರು ಬೆದರಿಕೆ ಹಾಕಿರುವ ಸಂಬಂಧ ಮಾಧ್ಯಮ ವರದಿಗಳನ್ನು ಕಂಡು ಆಘಾತವಾಗಿದೆ’ ಎಂದರು.
‘ನನ್ನ ಸಹೋದರ ರಾಹುಲ್ ಗಾಂಧಿ ಅವರ ವರ್ಚಸ್ಸು ಹೆಚ್ಚುತ್ತಿರುವುದು ಮತ್ತು ಅವರಿಗಿರುವ ಜನ ಬೆಂಬಲ ಕಂಡು ಹೆಚ್ಚಿನವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಬೆದರಿಕೆಯಂತಹ ಕೆಟ್ಟ ಕೃತ್ಯಗಳಿಗೆ ಕಾರಣವಾಗಿದೆ’ ಎಂದು ಹೇಳಿದರು.
‘ವಿರೋಧ ಪಕ್ಷದ ನಾಯಕನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಬೇಕಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಬೆದರಿಕೆ ಮತ್ತು ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಪುನರುಚ್ಚರಿಸಬೇಕಿದೆ’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.