ಪಟ್ನಾ: ‘ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ದೇಶದ್ರೋಹದ್ದಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ.
‘ಡಿಎಂಕೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸ್ಟಾಲಿನ್ ಹೇಳಿಕೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಸುಶೀಲ್ ಒತ್ತಾಯಿಸಿದ್ದಾರೆ.
‘ಡೆಂಗಿ ಮತ್ತು ಮಲೇರಿಯಾದಂತ ಸಾಂಕ್ರಾಮಿಕ ರೋಗಕ್ಕೆ ಸನಾತನ ಧರ್ಮವನ್ನು ಹೋಲಿಸಿರುವ ಉದಯನಧಿ ಸ್ಟಾಲಿನ್ ಅವರನ್ನು ಕೂಡಲೇ ಬಂಧಿಸಿ, ಜೈಲಿಗಟ್ಟಬೇಕು. ಇಂಥ ಹೇಳಿಕೆಯಿಂದ ಸಮಾಜದ ಸ್ವಾಸ್ಥ್ಯ ಕದಡಲಿದೆ’ ಎಂದಿದ್ದಾರೆ.
‘ಭಾರತೀಯರ ನಂಬಿಕೆಯನ್ನು ಬೇರು ಸಹಿತ ಕಿತ್ತೊಗೆಯಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ. ಡಿಎಂಕೆ ಪಕ್ಷವು ಇಂಥ ರಾಜಕೀಯ ಹೇಳಿಕೆಗಳೊಂದಿಗೆ ಹಿಂದಿನಿಂದಲೂ ಸಂಬಂಧ ಹೊಂದಿದೆ’ ಎಂದು ಮೋದಿ ಕಿಡಿಯಾಡಿದ್ದಾರೆ.
‘ಜತೆಗೆ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಭಾಗವಾಗಿರುವ ಡಿಎಂಕೆಯೊಂದಿಗೆ ಕೈಜೋಡಿಸಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಜೆಡಿಯುನ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಮೌನ ವಹಿಸಿರುವುದೇಕೆ? ಬಿಹಾರದಲ್ಲಿರುವ ಮಹಾಘಟಬಂಧನ್ ಸರ್ಕಾರವೂ ಹಿಂದೂ ವಿರೋಧಿ ನಿಲುವನ್ನೇ ಹೊಂದಿದೆ’ ಎಂದೂ ಆರೋಪಿಸಿದ್ದಾರೆ.
‘ಬಿಹಾರದಲ್ಲಿ ಶಾಲೆಗೆ ನೀಡುತ್ತಿರುವ ರಜೆಗಳನ್ನೇ ಗಮನಿಸಿದರೆ ಇವರ ನಿಲುವು ಸಾಬೀತಾಗುತ್ತದೆ. ಹಿಂದೂಗಳ ಬಹಳಷ್ಟು ಹಬ್ಬಗಳಿಗೆ ರಜೆಯನ್ನೇ ನೀಡಿಲ್ಲ. ಆದರೆ ಪ್ರವಾದಿ ಮಹಮ್ಮದ್ ಅವರ ಜನ್ಮದಿನಕ್ಕೆ ಇಂಥ ನಿರ್ಧಾರ ಕೈಗೊಳ್ಳುವ ತಾಕತ್ತು ಅವರಿಗಿಲ್ಲ. ಜನರು ಆಕ್ರೋಶಭರಿತರಾಗಿದ್ದಾರೆ. ರಕ್ಷಾ ಬಂಧನದ ದಿನ ಯಾವುದೇ ವಿದ್ಯಾರ್ಥಿ ಶಾಲೆಗೆ ಬಂದಿರಲಿಲ್ಲ’ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಗಿರಿಜಾ ಸಿಂಗ್ ಅವರೂ ಸುಶೀಲ್ ಮೋದಿ ಅವರ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ. ‘ಡಿಎಂಕೆ ನಾಯಕನ ಹೇಳಿಕೆ ವಿರುದ್ಧ ಹಿಂದೂಗಳು ಒಂದಾಗಬೇಕು. ಜಾತಿಯನ್ನೂ ಮೀರಿ ಹೋರಾಡಬೇಕು. ಹಿಂದೂ ವಿರೋಧಿ ‘ಇಂಡಿಯಾ’ ಒಕ್ಕೂಟದ ವಿರುದ್ಧ ದನಿ ಎತ್ತಬೇಕು’ ಎಂದಿದ್ದಾರೆ.
ಲೋಕ ಜನಶಕ್ತಿ ಪಕ್ಷದ ಮಾಜಿ ಅಧ್ಯಕ್ಷ ಚಿರಾಗ್ ಪಾಸ್ವಾನ್, ಪಶುಪತಿ ಪಾರಸ್ ಕೂಡಾ ಡಿಎಂಕೆ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರರಾದ ಉದಯನಿಧಿ ಅವರು ಕಳೆದ ಶನಿವಾರ ಆಯೋಜನೆಗೊಂಡಿದ್ದ ಸಾಹಿತಿ ಹಾಗೂ ಕಲಾವಿದರ ಕಾರ್ಯಕ್ರಮದಲ್ಲಿ ಮಾತನಾಡಿ ಸನಾತನ ಧರ್ಮ ಕುರಿತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.