ಮುಂಬೈ: ‘ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ, ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ವೈದ್ಯಕೀಯ ಜಾಮೀನು ಅರ್ಜಿಯ ತುರ್ತು ವಿಚಾರಣೆಗಾಗಿ ಹೈಕೋರ್ಟ್ ಮೊರೆ ಹೋಗುವುದಿಲ್ಲ‘ ಎಂದು ಅವರ ವಕೀಲ ಮಿಹಿರ್ ದೇಸಾಯಿ ಸೋಮವಾರ ತಿಳಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವಕೀಲ ಮಿಹಿರ್ ದೇಸಾಯಿ, ‘ಇಲ್ಲಿನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 84 ವರ್ಷದ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಭಾನುವಾರ ತಡರಾತ್ರಿಯವರೆಗೆ ಅವರು ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರಿಗೆ ಚಿಕಿತ್ಸೆಯೇ ಆದ್ಯತೆಯಾಗಿದೆ. ಹಾಗಾಗಿ ಪ್ರಕರಣದ ಜಾಮೀನು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಅಥವಾ ಯುಎಪಿಎ ಕಾಯ್ದೆ ಅಡಿ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಿಲ್ಲ‘ ಎಂದು ಹೇಳಿದರು.
ಅನಾರೋಗ್ಯ ಹಿನ್ನೆಯಲ್ಲೆಯಲ್ಲಿ ಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮೇ 28ರಂದು ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.
ವಕೀಲ ದೇಸಾಯಿ ಅವರು ಶನಿವಾರ ‘ಸ್ವಾಮಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ಇನ್ನೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಜಾಮೀನು ನೀಡುವಂತೆ ಕೋರಿ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ದೇಸಾಯಿಯವರ ವಾದ ಆಲಿಸಿದ ನ್ಯಾಯಪೀಠ, ಸ್ವಾಮಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು. ಅಲ್ಲಿಯವರೆಗೂ ಅವರಿಗೆ ಆಸ್ಪತ್ರೆಯಲ್ಲಿರಲು ಅನುಮತಿ ನೀಡಿತ್ತು.
ಕಳೆದವಾರ ಸ್ವಾಮಿ ಅವರು, ‘ಆರೋಪಿತರಿಗೆ ಜಾಮೀನು ನೀಡಲು ನಿರ್ಬಂಧ ವಿಧಿಸುವ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಸೆಕ್ಷನ್ 43 ಡಿ(5) ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹೊಸದಾಗಿ ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.