ಶ್ರೀನಗರ:ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಯುರೋಪ್ ಒಕ್ಕೂಟದ ಸಂಸದರ ನಿಯೋಗ ಹೇಳಿದೆ.
ಜಮ್ಮು–ಕಾಶ್ಮೀರಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಆಯ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ನಿಯೋಗ, ‘ನಾವು ಸುದೀರ್ಘ ವರ್ಷಗಳ ಹೋರಾಟದ ಬಳಿಕ ಶಾಂತಿ ನೆಲೆಸಿದ ಯುರೋಪ್‌ಗೆ ಸೇರಿದವರು. ಭಾರತವು ವಿಶ್ವದಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರವಾಗುವುದನ್ನು ಕಾಣಲು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದ ಪರ ನಿಲ್ಲಲಿದ್ದೇವೆ. ಈ ಭೇಟಿಯು ಇಲ್ಲಿನ ವಾಸ್ತವದ ಅರಿವು ಮೂಡಿಸಿದೆ’ ಎಂದು ಹೇಳಿದೆ.
‘ನಾವು ಭಾರತದ ನಾಗರಿಕರು. ದೇಶದ ಇತರ ಎಲ್ಲ ನಾಗರಿಕರಂತೆ ಇರಲು ಬಯಸುತ್ತೇವೆ. ದೇಶದ ಇತರ ಪ್ರದೇಶಗಳಂತೆಯೇ ನಮ್ಮಲ್ಲೂ ಅಭಿವೃದ್ಧಿಯಾಗುವುದನ್ನು ಆಶಿಸುತ್ತೇವೆ ಎಂಬುದಾಗಿ ಸ್ಥಳೀಯರು ನಮ್ಮ ಬಳಿ ಹೇಳಿದ್ದಾರೆ’ ಎಂದು ಸಂಸದರೊಬ್ಬರು ತಿಳಿಸಿದ್ದಾರೆ.
ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿ ಭಾರತದ ಆಂತರಿಕ ವಿಚಾರ ಎಂದೂ ನಿಯೋಗ ಹೇಳಿದೆ.
ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದ ಸಂಸದರ ನಿಯೋಗವನ್ನು ಬಿಗಿ ಭದ್ರತೆಯಲ್ಲಿ ದಾಲ್ ಸರೋವರ ಸೇರಿದಂತೆ ಹಲವು ಪ್ರದೇಶಗಳಿಗೆ ಕರೆದೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.