ADVERTISEMENT

ರಾಹುಲ್ ಗಾಂಧಿ ಸಂಸತ್ ಪ್ರವೇಶಿಸಿದ ಬಳಿಕ ಚರ್ಚೆಗಳ ಗುಣಮಟ್ಟ ಕುಸಿತ: ಕಿರಣ್ ರಿಜಿಜು

ಪಿಟಿಐ
Published 16 ನವೆಂಬರ್ 2024, 12:24 IST
Last Updated 16 ನವೆಂಬರ್ 2024, 12:24 IST
ಕಿರಣ್‌ ರಿಜಿಜು 
ಕಿರಣ್‌ ರಿಜಿಜು    

ನಾಗ್ಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್ತು ಪ್ರವೇಶಿಸಿದ ಬಳಿಕ ಲೋಕಸಭೆಯಲ್ಲಿ ಚರ್ಚೆಗಳ ಗುಣಮಟ್ಟ ಕುಸಿದಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಜಿಜು, ‘ನಮ್ಮಲ್ಲಿ (ಬಿಜೆಪಿ) ಮಾತನಾಡುವ ಹಾಗೂ ಚರ್ಚೆ ಮಾಡಬಲ್ಲ ಜನರಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲವೆಂದು ತೋರುತ್ತದೆ. ಇದ್ದರೂ ಅವರು ರಾಹುಲ್‌ ಗಾಂಧಿಗೆ ಹೆದರುತ್ತಾರೆ’ ಎಂದು ಹೇಳಿದರು.

‘ಕಾಂಗ್ರೆಸ್‌ನ ಹಿರಿಯ ಸಂಸದರು ಚರ್ಚೆ ಮಾಡಬೇಕೆಂದು ಬಯಸುತ್ತಾರೆ. ಆದರೆ, ರಾಹುಲ್‌ ಗಾಂಧಿಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಅವರು ಕೆಲ ಎನ್‌ಜಿಒಗಳು ನೀಡಿದ ಚೀಟಿಗಳನ್ನು ಮಾತ್ರವೇ ಓದುತ್ತಾರೆ. ದಲಿತರು, ಬುಡಕಟ್ಟು ಸಮುದಾಯ, ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹಾಗೂ ಸಂವಿಧಾನದ ಕುರಿತು ಮಾತನಾಡುವ ಹಕ್ಕು ರಾಹುಲ್‌ ಗಾಂಧಿಗೆ ಇಲ್ಲ’ ಎಂದರು.

ADVERTISEMENT

ರಾಜಕೀಯ ಕಾರಣಕ್ಕೆ ವಕ್ಫ್‌ ತಿದ್ದುಪಡಿಗೆ ವಿರೋಧ: ವಕ್ಫ್‌ (ತಿದ್ದುಪಡಿ) ಮಸೂದೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕಿರಣ್‌ ರಿಜಿಜು, ‘ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲಾಗುವುದು. ರಾಜಕೀಯ ಕಾರಣಗಳಿಂದ ಕೆಲವರು ಮಸೂದೆಯನ್ನು ವಿರೋಧಿಸುತ್ತಿದ್ದಾರೆ’ ಎಂದರು. 

‘ಮುಸ್ಲಿಂ ಸಮುದಾಯದ ಅನೇಕ ಹಿಂದುಳಿದ ಜನರು, ಸಮುದಾಯದ ಪ್ರತಿನಿಧಿಗಳು, ಮಹಿಳೆಯರು ಹಾಗೂ ಬುದ್ಧಿಜೀವಿಗಳು ಮಸೂದೆಯನ್ನು ಬೆಂಬಲಿಸುವುದಾಗಿ ನಮಗೆ ತಿಳಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.