ಕಲ್ಲಿದ್ದಲು ಆಮದು ತಗ್ಗಿಸಲು ಸ್ಥಾಯಿ ಸಮಿತಿ ಸಲಹೆ
ಪ್ರಜಾವಾಣಿ ವಾರ್ತೆ Published 7 ಆಗಸ್ಟ್ 2022, 13:53 IST Last Updated 7 ಆಗಸ್ಟ್ 2022, 13:53 IST ಪ್ರಾತಿನಿಧಿಕ ಚಿತ್ರ
ನವದೆಹಲಿ: ಕಲ್ಲಿದ್ದಲು ಆಮದು ಪ್ರಮಾಣವನ್ನು ಕಡಿಮೆ ಮಾಡಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಸಲಹೆ ನೀಡಿದೆ.
ಇಂಧನದ ಮೇಲಿನ ಸ್ಥಾಯಿ ಸಮಿತಿ ಸಂಸತ್ತಿಗೆ ತನ್ನ ವರದಿಯನ್ನು ಸಲ್ಲಿಸಿದ್ದು, ರಾಜ್ಯಗಳ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹೊಸದಾಗಿ ಹಂಚಿಕೆಯಾದ ಕಲ್ಲಿದ್ದಲು ಘಟಕಗಳಲ್ಲಿ ನಿಧಾನಗತಿಯಲ್ಲಿ ಕಲ್ಲಿದ್ದಲು ಉತ್ಪಾದನೆಯಾಗುತ್ತಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.
ಇಂಧನ ಮತ್ತು ಕಲ್ಲಿದ್ದಲು ಸಚಿವಾಲಯದ ಪ್ರಯತ್ನದಿಂದಾಗಿ 2020–21ರಲ್ಲಿ ಕಲ್ಲಿದ್ದಲು ಆಮದು ಶೇ 56ರಷ್ಟು ಕಡಿಮೆಯಾಗಿದೆ. ಆದಾಗ್ಯೂ, 2021ರಲ್ಲಿ ಆಮದು ಮಾಡಿಕೊಂಡ ಕಲ್ಲಿದ್ದಲಿನ ಅಂತರರಾಷ್ಟ್ರೀಯ ಬೆಲೆ ಏರಿದ ಕಾರಣ ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇದರಿಂದಾಗಿ ದೇಶೀಯ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಯಿತು ಮತ್ತು ವಿದ್ಯುತ್ ಸ್ಥಾವರಗಳಲ್ಲಿ ದೇಶೀಯ ಕಲ್ಲಿದ್ದಲು ದಾಸ್ತಾನು ಕಡಿಮೆಯಾಯಿತು ಎಂದು ವರದಿ ಹೇಳಿದೆ.
‘ದೇಶದಲ್ಲಿ ಬೃಹತ್ ಕಲ್ಲಿದ್ದಲು ನಿಕ್ಷೇಪಗಳಿದ್ದರೂ, ಗಣನೀಯ ಪ್ರಮಾಣದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ಕಲ್ಲಿದ್ದಲು ಉತ್ತಮ ಗುಣಮಟ್ಟದ್ದಾಗಿದೆ, ಕೆಲವು ಸ್ಥಾವರಗಳನ್ನು ಆಮದು ಮಾಡಿದ ಕಲ್ಲಿದ್ದಲಿನ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದುಸಚಿವಾಲಯ ಆಮದಿಗೆ ಕಾರಣ ತಿಳಿಸಿದೆ. ಇದನ್ನು ಸಮಿತಿಯು ಪರಿಗಣಿಸುತ್ತದೆ. ಆದರೆ ದೇಶದ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವುದರಿಂದ ಹಂತ ಹಂತವಾಗಿ ಆಮದನ್ನು ಕಡಿಮೆ ಮಾಡಬೇಕು’ ಎಂದು ಸಮಿತಿ ಸಲಹೆ ನೀಡಿದೆ.