ನವದೆಹಲಿ: ಸಂವಿಧಾನದ 341ನೆಯ ವಿಧಿಯ ಅಡಿಯಲ್ಲಿ ಪ್ರಕಟಿಸಲಾಗಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ತರುವ ಅಧಿಕಾರವು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಬಿಹಾರ ರಾಜ್ಯ ಸರ್ಕಾರವು 2015ರ ಜುಲೈ 1ರಂದು ಕೈಗೊಂಡ ನಿರ್ಣಯವನ್ನು ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸತೀಶ್ ಚಂದ್ರ ಶರ್ಮ ಅವರು ಇದ್ದ ವಿಭಾಗೀಯ ಪೀಠವು ರದ್ದುಪಡಿಸಿದೆ. ಅತ್ಯಂತ ಹಿಂದುಳಿದಿರುವ ಜಾತಿಯಾದ ‘ತಾಂತಿ–ತತವಾ’ಅನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇರುವ ‘ಪಾನ್/ಸ್ವಾಸಿ’ ಜಾತಿಯ ಜೊತೆ ವಿಲೀನಗೊಳಿಸುವ ಈ ನಿರ್ಣಯವು ಅಕ್ರಮ ಎಂದು ಪೀಠವು ಹೇಳಿದೆ.
ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನವು ಸದುದ್ದೇಶ ಹೊಂದಿರಲಿಲ್ಲ. ಆ ತೀರ್ಮಾನವು ಸಂವಿಧಾನದಲ್ಲಿ ಇರುವ ಅವಕಾಶಗಳ ವ್ಯಾಪ್ತಿಯನ್ನೂ ಮೀರಿದೆ. ಸರ್ಕಾರವು ಮಾಡಿದ ಕುಚೋದ್ಯಕ್ಕೆ ಕ್ಷಮೆ ಇಲ್ಲ ಎಂದು ಪೀಠವು ಕಟುವಾಗಿ ಹೇಳಿದೆ.
341ನೆಯ ವಿಧಿಯನ್ನು ಉಲ್ಲೇಖಿಸಿರುವ ಪೀಠವು, ಸಂಸತ್ತು ರೂಪಿಸಿದ ಕಾನೂನಿನ ಮೂಲಕ ಮಾತ್ರವೇ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಬದಲಾಯಿಸಲು ಅವಕಾಶ ಇದೆ ಎಂದು ಹೇಳಿದೆ. ಪರಿಶಿಷ್ಟ ಜಾತಿಗಳನ್ನು ಹೆಸರಿಸಿ ಹೊರಡಿಸಿದ ಅಧಿಸೂಚನೆಯನ್ನು, ಸಂಸತ್ತು ರೂಪಿಸಿದ ಕಾನೂನು ಹೊರತುಪಡಿಸಿ, ಇನ್ನೊಂದು ಅಧಿಸೂಚನೆಯ ಮೂಲಕ ಬದಲಾಯಿಸಲು ಆಗುವುದಿಲ್ಲ ಎಂದು ಕೂಡ ಪೀಠವು ಸ್ಪಷ್ಟಪಡಿಸಿದೆ.
2015ರ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಪಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಡಾ.ಭೀಮ್ ರಾವ್ ಅಂಬೇಡ್ಕರ್ ವಿಚಾರ್ ಮಂಚ್ ಬಿಹಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.