ADVERTISEMENT

ಇ.ಡಿ ತನಿಖೆಗೆ ರಾಜ್ಯ ಸರ್ಕಾರದ ನೆರವು ಬೇಕು: ಸುಪ್ರೀಂ

ಪಿಟಿಐ
Published 26 ಫೆಬ್ರುವರಿ 2024, 16:14 IST
Last Updated 26 ಫೆಬ್ರುವರಿ 2024, 16:14 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಅಪರಾಧ ನಡೆದಿದೆಯೇ ಎಂಬುದನ್ನು ಪತ್ತೆ ಮಾಡುವ ಕೆಲಸದಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ರಾಜ್ಯದ ಆಡಳಿತ ಯಂತ್ರವು ನೆರವು ನೀಡಬೇಕು ಎಂದು ಸುಪ್ರೀಂ ಕೋರ್ಟ್‌, ತಮಿಳುನಾಡು ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಹೇಳಿದೆ.

ಹಣದ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ ಇ.ಡಿ. ತನಿಖೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರವು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಪ್ರಶ್ನಿಸಿತ್ತು.

ADVERTISEMENT

ಮರಳು ಗಣಿಗಾರಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣವೊಂದರಲ್ಲಿನ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ವೆಲ್ಲೂರು, ತಿರುಚಿರಾಪಳ್ಳಿ, ಕರೂರು, ತಂಜಾವೂರು ಮತ್ತು ಅರಿಯಾಲೂರು ಜಿಲ್ಲಾಧಿಕಾರಿಗಳಿಗೆ ಇ.ಡಿ. ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಈ ಜಿಲ್ಲಾಧಿಕಾರಿಗಳು ಹಾಗೂ ತಮಿಳುನಾಡು ಸರ್ಕಾರದ ಕಡೆಯಿಂದ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸಮನ್ಸ್‌ಗೆ ಹೈಕೋರ್ಟ್‌ ತಡೆ ನೀಡಿತ್ತು.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ. ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರು ಇದ್ದ ವಿಭಾಗೀಯ ಪೀಠವು ಇ.ಡಿ. ಅರ್ಜಿಯ ವಿಚಾರಣೆ ನಡೆಸಿತು.

‘ಅಪರಾಧ ನಡೆದಿದೆಯೇ ಎಂಬುದನ್ನು ಪತ್ತೆ ಮಾಡುವಲ್ಲಿ ರಾಜ್ಯ ಸರ್ಕಾರ ಹಾಗೂ ಅದರ ಅಧಿಕಾರಿಗಳು ಇ.ಡಿ.ಗೆ ನೆರವು ಒದಗಿಸಬೇಕು’ ಎಂದು ಪೀಠವು ಹೇಳಿತು. ‘ನೆರವು ಕೊಡುವಂತೆ ರಾಜ್ಯದ ಆಡಳಿತ ಯಂತ್ರವನ್ನು ಕೇಳಿದ್ದಲ್ಲಿ, ಅದರಿಂದ ಆಗಿರುವ ಹಾನಿಯಾದರೂ ಏನು’ ಎಂದು ಪ್ರಶ್ನಿಸಿತು.

‘ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದಾಗ ರಾಜ್ಯ ಸರ್ಕಾರಕ್ಕೆ ಆಗುವ ತೊಂದರೆ ಏನು? ಜಿಲ್ಲಾಧಿಕಾರಿಗಳಿಗೆ ವೈಯಕ್ತಿಕವಾಗಿ ತೊಂದರೆ ಉಂಟಾದಲ್ಲಿ ಅವರು ಅರ್ಜಿ ಸಲ್ಲಿಸಬಹುದಿತ್ತು’ ಎಂದು ಪೀಠವು ಹೇಳಿತು. ಗಣಿಗಾರಿಕೆಯು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಗುರುತಿಸಲಾಗಿರುವ ಅಪರಾಧ ಅಲ್ಲ ಎಂದು ತಮಿಳುನಾಡು ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ವಿವರಿಸಿದರು. ಇ.ಡಿ. ಇರುವುದು ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಎಂದು ಸಿಬಲ್ ಹೇಳಿದರು.

‘ಸರ್ಕಾರದ ಅಧಿಕಾರಿಗಳಿಗೆ ಗಣಿಗಾರಿಕೆಗೆ ಸಂಬಂಧಿಸಿದ ಗುತ್ತಿಗೆ ಒಪ್ಪಂದದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿರುವ ಕಾರಣ ಸರ್ಕಾರವು ಅರ್ಜಿ ಸಲ್ಲಿಸಿದೆ’ ಎಂದು ಸಿಬಲ್ ತಿಳಿಸಿದರು. 

‘ಪ್ರಕರಣವು ಗಣಿಗಾರಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ. ಕ್ರಿಮಿನಲ್ ಪಿತೂರಿ ಮತ್ತು ವಂಚನೆಯ ಆರೋಪಗಳೂ ಇಲ್ಲಿವೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆದರೆ ರಾಜ್ಯ ಸರ್ಕಾರವು ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿರುವಂತಿದೆ’ ಎಂದು ಇ.ಡಿ. ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.