ADVERTISEMENT

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಸ್ಥಳಗಳು: ಮೋದಿ, ಗಣ್ಯರಿಂದ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2023, 5:39 IST
Last Updated 19 ಸೆಪ್ಟೆಂಬರ್ 2023, 5:39 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   ಪಿಟಿಐ ಚಿತ್ರ

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು, ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲ ಹಾಗೂ ಪಶ್ಚಿಮ ಬಂಗಾಳದ ಶಾಂತಿನಿಕೇತನ ತಾಣಗಳಿಗೆ ಇದೀಗ ಜಾಗತಿಕ ಮನ್ನಣೆ ದೊರೆತಿದ್ದು, ಯೂನೆಸ್ಕೊ(UNESCO) ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ಹೊಯ್ಸಳರ ಕಾಲದ ಕಲಾಕೃತಿಗಳು ಭವ್ಯ ಕೆತ್ತನೆಗಳಾಗಿವೆ. ಹೊಯ್ಸಳ ದೇವಾಲಯಗಳ ಸೌಂದರ್ಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ. ಇದು ನಮ್ಮ ಪೂರ್ವಜರ ಅಸಾಧಾರಣ ಕಲೆಗೆ ಸಾಕ್ಷಿಯಾಗಿದೆ. ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದ ಶಾಂತಿನಿಕೇತನ ಮತ್ತು ಕರ್ನಾಟಕದ ಹೊಯ್ಸಳರ ಕಾಲದ ದೇಗುಲಗಳು ನಮ್ಮ ಸಂಸ್ಕೃತಿಯ ಶಾಶ್ವತತೆಗೆ ಜೀವಂತ ಸಾಕ್ಷಿಗಳಾಗಿವೆ. ಗುರುದೇವ ರವೀಂದ್ರನಾಥ ಟ್ಯಾಗೋರ್ ಕನಸಿನ ಶಾಂತಿನಿಕೇತನ ಮತ್ತು ಹೊಯ್ಸಳರ ಕಾಲದ ಭವ್ಯ ದೇವಾಲಯಗಳು ಅದ್ಬುತ ಕರಕುಶಲತೆಯ ಸಂಕೇತವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಎಕ್ಸ್‌ನಲ್ಲಿ( ಟ್ವಿಟರ್‌) ತಿಳಿಸಿದ್ದಾರೆ.

ADVERTISEMENT

‘ಹಾಸನ ಜಿಲ್ಲೆಯಲ್ಲಿರುವ ಹೊಯ್ಸಳ ಕಾಲದ ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಯೂನೆಸ್ಕೊ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಂತಸ ತಂದಿದೆ. ನಾನು ಈ ಜಿಲ್ಲೆಯವನೇ ಎಂದು ಹೇಳಲು ಹೆಮ್ಮೆಪಡುತ್ತೇನೆ‘ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ದೇವೇಗೌಡ ಎಕ್ಸ್‌ನಲ್ಲಿ(ಟ್ವಿಟರ್‌) ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವ ಮಟ್ಟದ ಮೂಲಸೌಲಭ್ಯ ಹಾಗೂ ಸುರಕ್ಷತೆ ಒದಗಿಸಲು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.