ನವದೆಹಲಿ: ರಾಜ್ಯ ಸರ್ಕಾರಗಳು ಬಯಸಿದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಗೆ ಅವಕಾಶ ಕಲ್ಪಿಸಬಹುದು ಎಂದು ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಗೆ ತಿಳಿಸಿದೆ.
‘ರಾಜ್ಯಗಳು ಬಯಸಿದರೆ, ಪಠ್ಯಕ್ರಮದಲ್ಲಿ ಭಗವದ್ಗೀತೆ ಮತ್ತು ಭೋಜ್‌ಪುರಿ ಭಾಷಾ ಕಲಿಕೆಯನ್ನು ಸೇರಿಸಬಹುದು. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಮಕ್ಕಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ’ ಎಂದುಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ‘ದೇಶದಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಲಿಸಲು ನಿಬಂಧನೆಗಳನ್ನು ತರಲು ಸರ್ಕಾರವು ಪರಿಗಣಿಸುತ್ತದೆಯೇ’ ಎಂಬ ಗೋಪಾಲ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ದೇವಿ, ‘ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಮಾದರಿಯಲ್ಲಿ ಈಗಾಗಲೇ ಭಗವದ್ಗೀತೆಯನ್ನು ವಿವಿಧ ತರಗತಿಗಳಲ್ಲಿ ಕಲಿಸಲಾಗುತ್ತಿದೆ. 6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಳಿಗೆ ಭಗವದ್ಗೀತೆಯ ಕೆಲವು ಅಧ್ಯಾಯಗಳನ್ನು ಈಗಾಗಲೇ ಕಲಿಸಲಾಗುತ್ತಿದೆ’ ಎಂದರು.
ಪ್ರಶ್ನೆಯ ಸಮಯದಲ್ಲಿ ಗೋಪಾಲ್ ಶೆಟ್ಟಿ ಅವರು, ‘ಕಾಂಗ್ರೆಸ್ ಸದಸ್ಯರು ಭಗವದ್ಗೀತೆ ಓದಬೇಕು. ಇದರಿಂದ ಒಳ್ಳೆಯ ಕೆಲಸ ಮಾಡಲು ಅವರಿಗೆ ಬುದ್ಧಿ ಬರುತ್ತದೆ’ ಎಂದೂ ಸಲಹೆ ನೀಡಿದರು.
ಶೆಟ್ಟಿ ಅವರು ಪ್ರಶ್ನೆ ಕೇಳುತ್ತಿದ್ದ ಸಮಯದಲ್ಲಿ, ಕಾಂಗ್ರೆಸ್ ಸದಸ್ಯರು ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಲಖಿಂಪುರ ಖೇರಿ ಪ್ರಕರಣದಲ್ಲಿ ಬಂಧಿತ ಆರೋಪಿಗಳಲ್ಲಿ ಕೇಂದ್ರ ಗೃಹಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರೂ ಸೇರಿದ್ದಾರೆ. ಹಾಗಾಗಿ, ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.