ನವದೆಹಲಿ: ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಟಿ) ಕೆನೆಪದರಕ್ಕೆ ಸೇರಿದವರನ್ನು ಗುರುತಿಸಲು ಮತ್ತು ಅವರಿಗೆ ಮೀಸಲಾತಿಯ ಸೌಲಭ್ಯವನ್ನು ನಿರಾಕರಿಸಲು ರಾಜ್ಯ ಸರ್ಕಾರಗಳು ನೀತಿಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಹೇಳಿದ್ದಾರೆ.
ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿದವರು. ಅಲ್ಲದೆ ಅವರು ಮುಂದಿನ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪದೋನ್ನತಿ ಹೊಂದಲಿದ್ದಾರೆ.
ಪರಿಶಿಷ್ಟ ಜಾತಿಗಳ ಒಳವರ್ಗೀಕರಣದ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸಾರಿರುವ ಸಂವಿಧಾನ ಪೀಠದಲ್ಲಿ ಒಬ್ಬರಾಗಿರುವ ನ್ಯಾಯಮೂರ್ತಿ ಗವಾಯಿ ಅವರು, ಸಹಮತದ ತಮ್ಮ ತೀರ್ಪನ್ನು ಪ್ರತ್ಯೇಕವಾಗಿ ಬರೆದಿದ್ದಾರೆ.
ಒಳವರ್ಗೀಕರಣದ ಅಧಿಕಾರವು ರಾಜ್ಯಗಳಿಗೆ ಇದೆ ಎಂಬ ತೀರ್ಪು ನೀಡಿರುವ ಆರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು, ‘ಕೆನೆಪದರದ ವ್ಯಾಪ್ತಿಗೆ ಬರುವವರನ್ನು ಮೀಸಲಾತಿಯ ಸೌಲಭ್ಯದಿಂದ ಹೊರಗಿರಿಸಬೇಕು’ ಎಂದು ಹೇಳಿದ್ದಾರೆ.
281 ಪುಟಗಳಷ್ಟು ದೀರ್ಘವಾದ, ಸಹಮತದ ತೀರ್ಪು ಬರೆದಿರುವ ನ್ಯಾಯಮೂರ್ತಿ ಗವಾಯಿ ಅವರು, ‘ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿರದ ಹಿಂದುಳಿದ ವರ್ಗದವರಿಗೆ ಆದ್ಯತೆಯನ್ನು ನೀಡುವುದು ಸರ್ಕಾರದ ಕರ್ತವ್ಯ’ ಎಂದು ಹೇಳಿದ್ದಾರೆ.
‘ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರವನ್ನು ಗುರುತಿಸಲು ರಾಜ್ಯ ಸರ್ಕಾರಗಳು ನೀತಿಯೊಂದನ್ನು ರೂಪಿಸಬೇಕು. ಸಂವಿಧಾನದಲ್ಲಿ ಹೇಳಿರುವ ನಿಜವಾದ ಸಮಾನತೆಯ ಗುರಿಯನ್ನು ಸಾಧಿಸಲು ಈ ಕ್ರಮದಿಂದ ಮಾತ್ರವೇ ಸಾಧ್ಯ ಎಂಬುದು ನನ್ನ ಅನಿಸಿಕೆ’ ಎಂದು ಗವಾಯಿ ಅವರು ಹೇಳಿದ್ದಾರೆ.
ಮೀಸಲಾತಿಯ ಪ್ರಯೋಜನವನ್ನು ಪಡೆದಿರುವ, ಪರಿಶಿಷ್ಟ ಜಾತಿಗಳಿಗೆ ಸೇರಿದವರ ಮಕ್ಕಳನ್ನು ಹಾಗೂ ಮೀಸಲಾತಿಯ ಪ್ರಯೋಜನ ಪಡೆಯದ, ಪರಿಶಿಷ್ಟ ಜಾತಿಗಳಿಗೆ ಸೇರಿದವರ ಮಕ್ಕಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳಿಗೆ ಕೆನೆಪದರದ ತತ್ವವು ಅನ್ವಯ ಆಗಬೇಕು ಎಂಬ ವಿಚಾರದಲ್ಲಿ ತಾವು ಗವಾಯಿ ಅವರೊಂದಿಗೆ ಸಹಮತ ಹೊಂದಿರುವುದಾಗಿ ನ್ಯಾಯಮೂರ್ತಿ ವಿಕ್ರಮನಾಥ್ ಹೇಳಿದ್ದಾರೆ. ಆದರೆ, ‘ಕೆನೆಪದರವನ್ನು ಗುರುತಿಸಲು ಬಳಸುವ ಮಾನದಂಡಗಳು ಒಬಿಸಿ ವರ್ಗಗಳಲ್ಲಿ ಕೆನೆಪದರ ಗುರುತಿಸಲು ಬಳಸುವ ಮಾನದಂಡಗಳಿಗಿಂತ ಭಿನ್ನವಾಗಿರಬಹುದು’ ಎಂದು ಅವರು ಹೇಳಿದ್ದಾರೆ.
ಮೀಸಲಾತಿಯ ಪ್ರಯೋಜನವನ್ನು ಪಡೆದು, ಸಾಮಾನ್ಯ ವರ್ಗದವರ ಜೊತೆ ಸಮಾನವಾಗಿ ಹೆಜ್ಜೆಹಾಕುವ ಸಾಮರ್ಥ್ಯ ಪಡೆದಿರುವವರನ್ನು ಗುರುತಿಸಿ ಮೀಸಲಾತಿ ವ್ಯಾಪ್ತಿಯಿಂದ ಹೊರಗಿರಿಸಲು ಕಾಲಕಾಲಕ್ಕೆ ಕ್ರಮ ವಹಿಸಬೇಕು ಎಂದು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹೇಳಿದ್ದಾರೆ.
‘ಮೀಸಲಾತಿಯ ಸೌಲಭ್ಯವನ್ನು ಮೊದಲ ತಲೆಮಾರಿಗೆ ಮಾತ್ರ ಅಥವಾ ಒಂದು ತಲೆಮಾರಿಗೆ ಮಾತ್ರ ಸೀಮಿತವಾಗಿಸಬೇಕು. ಕುಟುಂಬದ ಯಾವುದೇ ಒಂದು ತಲೆಮಾರು ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಂಡು ಉನ್ನತ ಸ್ಥಾನವನ್ನು ತಲುಪಿದೆ ಎಂದಾದರೆ, ಎರಡನೆಯ ತಲೆಮಾರಿಗೆ ಮೀಸಲಾತಿಯ ಸೌಲಭ್ಯವು ತಾರ್ಕಿಕವಾಗಿ ಸಿಗುವಂತಿರಬಾರದು’ ಎಂದು ಮಿತ್ತಲ್ ಅವರು ವಿವರಿಸಿದ್ದಾರೆ.
ಎಸ್‌ಸಿ ಹಾಗೂ ಎಸ್‌ಟಿಗಳ ನಡುವೆ ಕೆನೆಪದರವನ್ನು ಗುರುತಿಸುವ ಕೆಲಸವು ರಾಜ್ಯ ಸರ್ಕಾರಗಳ ಪಾಲಿಗೆ ಸಾಂವಿಧಾನಿಕ ಅನಿವಾರ್ಯ ಆಗಬೇಕು ಎಂದು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.