ಪಾಟ್ನಾ: ಅದಾನಿ ಸಮೂಹದ ವಂಚನೆ ಆರೋಪಗಳ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿ, ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂಬ ಆರೋಪಗಳನ್ನು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಲ್ಲಗಳೆದಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ಮಾನಹಾನಿಕರ ಹೇಳಿಕೆ ನೀಡಿದ್ದರು. ಅದಕ್ಕಾಗಿ ಶಿಕ್ಷೆಯಾಗಿದೆ. ಗುಜರಾತ್ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ಕೂಡಲೇ ಕಾಂಗ್ರೆಸ್ ಪರ ವಕೀಲರು ತಡೆ ಕೋರಿ ಮನವಿ ಸಲ್ಲಿಸಲಿಲ್ಲ. ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಹಾಗೆ ನಡೆದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಮಾನನಷ್ಟ ಮೊಕದ್ದಮೆಗೆ ಕಾರಣವಾದ ಮೋದಿ ಉಪನಾಮದ ಬಗ್ಗೆ ಮಾತನಾಡಿದ ರವಿಶಂಕರ್, ರಾಹುಲ್ ಗಾಂಧಿಯವರು ವಿಷಯದ ಬಗ್ಗೆ ಮಾತನಾಡಿಲ್ಲ, ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಅದಕ್ಕಾಗಿಯೇ ಅವರಿಗೆ ಶಿಕ್ಷೆಯಾಗಿದೆ. ನಾನು ಚಿಂತನಾಶೀಲನಾಗಿಯೇ ಮಾತನಾಡುತ್ತೇನೆ ಎಂದು ರಾಹುಲ್ ಇಂದು ಹೇಳಿದ್ದಾರೆ. ಹಾಗಿದ್ದರೆ, ಅದರರ್ಥ 2019ರಲ್ಲಿ ಅವರು ನೀಡಿದ್ದ ಹೇಳಿಕೆಯೂ ಚಿಂತನಾಶೀಲವಾಗಿಯೇ ನೀಡಿದ್ದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ನಾಯಕ ಒಬಿಸಿ ವರ್ಗಗಳನ್ನೂ ಅವಮಾನಿಸಿದ್ದಾರೆ. ಈ ವಿಷಯದಲ್ಲಿ ದೇಶದಾದ್ಯಂತ ಬಿಜೆಪಿಯು ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.