ADVERTISEMENT

ವೋಟ್‌ ಬ್ಯಾಂಕ್‌ ರಾಜಕಾರಣದಿಂದ ದೂರ: ಅಭಿವೃದ್ಧಿಯೇ ನಮ್ಮ ಸರ್ಕಾರದ ಮಂತ್ರ; ಮೋದಿ

ಪಿಟಿಐ
Published 16 ನವೆಂಬರ್ 2024, 13:01 IST
Last Updated 16 ನವೆಂಬರ್ 2024, 13:01 IST
<div class="paragraphs"><p>ಪ್ರಧಾನಿ ಮೋದಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು</p></div>

ಪ್ರಧಾನಿ ಮೋದಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು

   

–ಪಿಟಿಐ ಚಿತ್ರ

ನವದೆಹಲಿ: ‘ವೋಟ್‌ ಬ್ಯಾಂಕ್‌’ ರಾಜಕಾರಣದಿಂದ ದೂರ ಉಳಿದು ಜನರ ಅಭಿವೃದ್ಧಿಯ ಮಂತ್ರದೊಂದಿಗೆ ತಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ADVERTISEMENT

‘ಎಚ್‌.ಟಿ ನಾಯಕತ್ವ ಶೃಂಗ’ದಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ ಎಂದು ಪ್ರತಿಪಾದಿಸಿದರು.

ಭಾರತವು 10 ವರ್ಷಗಳಲ್ಲಿ ಐದು ಚುನಾವಣೆಗಳನ್ನು ಕಂಡಂತಹ 1990ರ ದಶಕವನ್ನು ನೆನಪಿಸಿಕೊಂಡ ಮೋದಿ, ‘ಕೆಲ ವರ್ಷಗಳ ಹಿಂದೆ ದೇಶದಲ್ಲಿ ಅಸ್ಥಿರತೆ ಇತ್ತು’ ಎಂದರು.

‘ಚಿಂತಕರು, ಪತ್ರಿಕೆಗಳಲ್ಲಿ ರಾಜಕೀಯ ವಿಶ್ಲೇಷಣೆ ಬರೆಯುವವರು ಭಾರತದಲ್ಲಿ ಎಲ್ಲವೂ ಹೀಗೆಯೇ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ದೇಶದ ಜನರು ಅವರ ಭವಿಷ್ಯವನ್ನು ಸುಳ್ಳಾಗಿಸಿದರು’ ಎಂದು ಹೇಳಿದರು.

‘ಈ ಹಿಂದೆಯೆಲ್ಲಾ, ಮುಂದಿನ ಚುನಾವಣೆಯನ್ನು ಗೆಲ್ಲಬೇಕು ಎಂಬ ಏಕೈಕ ಉದ್ದೇಶವನ್ನಿಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿತ್ತು. ಚುನಾವಣೆ ಗೆಲ್ಲಲು ವೋಟ್‌ ಬ್ಯಾಂಕ್‌ ಅನ್ನು ರಚಿಸಿ, ಆ ವೋಟ್‌ ಬ್ಯಾಂಕ್‌ ಅನ್ನು ಮೆಚ್ಚಿಸಲು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿತ್ತು’ ಎಂದು ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘ಈ ರೀತಿಯ ರಾಜಕಾರಣದಿಂದ ಉಂಟಾದ ದೊಡ್ಡ ಹಾನಿ ಎಂದರೆ, ದೇಶದಲ್ಲಿ ಅಸಮಾನತೆಯ ವ್ಯಾಪ್ತಿ ಹೆಚ್ಚುತ್ತಲೇ ಹೋಯಿತು. ಅಭಿವೃದ್ದಿ ಕೆಲಸಗಳು ಗೋಚರಿಸಲಿಲ್ಲ. ಜನರು ಸರ್ಕಾರದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡರು. ಆದರೆ, ನಾವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದ್ದೇವೆ’ ಎಂದರು.

‘ಭಯೋತ್ಪಾದಕರು ಸುರಕ್ಷಿತವಾಗಿಲ್ಲ’

‘ನೆರೆಯ ದೇಶಗಳ ಪ್ರಾಯೋಜಿತ ಭಯೋತ್ಪಾದನೆಯಿಂದಾಗಿ ನಮ್ಮ ದೇಶದ ಜನರು ತಮ್ಮ ಸ್ವಂತ ಮನೆ ಮತ್ತು ನಗರಗಳಲ್ಲಿ ಸುರಕ್ಷತೆಯ ಭಾವ ಹೊಂದಿದ್ದ ಕಾಲವೊಂದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಯೋತ್ಪಾದಕರು ಅವರ ಮನೆಗಳಲ್ಲೂ ಸುರಕ್ಷಿತವಾಗಿಲ್ಲ’ ಎಂದು ಪ್ರಧಾನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.