ಚೆನ್ನೈ:‘ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 20 ಮುಸ್ಲಿಮರು ಸೇರಿದಂತೆ 49 ಕೈದಿಗಳು ಅವಧಿಪೂರ್ಣಗೊಂಡಿದ್ದರೂ ಸೆರೆವಾಸ ಅನುಭವಿಸುತ್ತಿದ್ದಾರೆ. ರಾಜ್ಯಪಾಲರ ಒಪ್ಪಿಗೆ ದೊರೆತ ತಕ್ಷಣ ಈ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ವಾಲಿನ್ ಮಂಗಳವಾರ ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ತಿಳಿಸಿದ ಸ್ಟಾಲಿನ್, ‘ಈಗಾಗಲೇ 9 ಮುಸ್ಲಿಂ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಮುಸ್ಲಿಂ ಕೈದಿಗಳ ಸ್ಥಿತಿ ಕುರಿತು ವಿರೋಧ ಪಕ್ಷದ ನಾಯಕ ಇ.ಕೆ.ಪಳನಿಸ್ವಾಮಿ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಉತ್ತರಿಸುವ ವೇಳೆ ಸ್ಟಾಲಿನ್ ಈ ಮಾಹಿತಿ ನೀಡಿದ್ದಾರೆ.
‘ಮುಸ್ಲಿಮರ ಕುರಿತು ಈಗ ದಿಢೀರ್ ವಿಶೇಷ ಗಮನ ಸೆಳೆಯುವ ಸೂಚನೆ ಮಂಡನೆ ಹಾಗೂ ಕಾಳಜಿ ತೋರುತ್ತಿರುವುದಕ್ಕೆ ಕಾರಣ ಏನು’ ಎಂದು ಕುಟುಕಿದ ಸ್ಟಾಲಿನ್, ‘ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ ಈ ವಿಚಾರವಾಗಿ ಕೈಗೊಂಡ ಕ್ರಮಗಳೇನು’ ಎಂದು ಪ್ರಶ್ನಿಸಿದರು.
ಈ ಸೂಚನೆ ಬೆಂಬಲಿಸಿ ಮಾತನಾಡಿದ ವಿವಿಧ ಪಕ್ಷಗಳ ನಾಯಕು, ಭಯೋತ್ಪಾದನಾ ದಾಳಿಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸುತ್ತಿರುವ ಮುಸ್ಲಿಂ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, ‘ವಯಸ್ಸಾದ ಮತ್ತು ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರು ಸೇರಿದಂತೆ 20 ವರ್ಷಗಳಷ್ಟು ಕಾಲ ಸೆರೆವಾಸ ಅನುಭವಿಸಿರುವ ಕೈದಿಗಳ ಬಿಡುಗಡೆ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಆದಿನಾಥನ್ ನೇತೃತ್ವದಲ್ಲಿ 2021ರ ಡಿಸೆಂಬರ್ 22ರಂದು ಸಮಿತಿ ರಚಿಸಲಾಗಿತ್ತು’.
‘ಕಳೆದ ವರ್ಷ ಅಕ್ಟೋಬರ್ 28ರಂದು ವರದಿ ಸಲ್ಲಿಸಿದ್ದ ಸಮಿತಿ, 264 ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡಿತ್ತು. ವರದಿ ಆಧಾರದಲ್ಲಿ, 20 ಮುಸ್ಲಿಮರು ಸೇರಿದಂತೆ 49 ಕೈದಿಗಳನ್ನು ಬಿಡುಗಡೆಗಾಗಿ ಆಯ್ಕೆ ಮಾಡಿ, ಅನುಮತಿಗಾಗಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಿದ್ದೇವೆ’ ಎಂದೂ ವಿವರಿಸಿದರು.
ಸ್ಟಾಲಿನ್ ಮಾತಿಗೆ ಪ್ರತಿಕ್ರಿಯಿಸಿದ ಪಳನಿಸ್ವಾಮಿ, ‘ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳ ಬಿಡುಗಡೆಗೆ ಪ್ರಯತ್ನಿಸಿದ್ದೇ ಎಐಎಡಿಎಂಕೆ ಸರ್ಕಾರ. ಆದರೆ, ಅವರನ್ನು ನಿಮ್ಮ ಅಧಿಕಾರದ ಅವಧಿಯಲ್ಲಿ ಬಿಡುಗಡೆ ಮಾಡಲಾಯಿತು’ ಎಂದರು.
‘ಕೈದಿಗಳ ಬಿಡುಗಡೆಗೆ ಅನುಮೋದನೆ ನೀಡುವಂತೆ ನಿಮ್ಮ ನೇತೃತ್ವದಲ್ಲಿ ನಿಯೋಗವೊಂದನ್ನು ರಾಜ್ಯಪಾಲರ ಬಳಿ ಕರೆದೊಯ್ಯಲು ಸಿದ್ಧರಿದ್ದೀರಾ’ ಎಂದು ಪಳನಿಸ್ವಾಮಿ ಅವರನ್ನು ಸ್ಟಾಲಿನ್ ಕೇಳಿದರು.
ಆಗ, ಕೆಲ ಕಾಲ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ‘ತಮಗೆ ಮಾತನಾಡಲು ವಿಧಾನಸಭಾಧ್ಯಕ್ಷ ಎಂ.ಅಪ್ಪಾವು ಅವಕಾಶ ನೀಡುತ್ತಿಲ್ಲ’ ಎಂದು ದೂರಿದ ಪಳನಿಸ್ವಾಮಿ, ತಮ್ಮ ಶಾಸಕರೊಂದಿಗೆ ಸಭಾತ್ಯಾಗ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.