ADVERTISEMENT

ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ: ತಜ್ಞರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 11:23 IST
Last Updated 29 ಜನವರಿ 2023, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರಾಖಂಡದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಯೋಜಿತವಲ್ಲದ ಮತ್ತು ಅನಿಯಂತ್ರಿತ ನಿರ್ಮಾಣವು ಜೋಶಿಮಠವನ್ನು ಮುಳುಗುವ ಅಂಚಿಗೆ ತಂದಿದ್ದು, ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಬೇಕು ಎಂದು ತಜ್ಞರು ಒತ್ತಾಯಿಸಿದರು.

ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಶನಿವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ, ಜೋಶಿಮಠದಲ್ಲಿ ಪರಿಸ್ಥಿತಿಯನ್ನು ಎದುರಿಸಲು ತೆಗೆದುಕೊಂಡ ಕ್ರಮಗಳು ಅಸಮರ್ಪಕವಾಗಿವೆ. ಈ ಸಮಸ್ಯೆ ಪರಿಹರಿಸಲು ದೀರ್ಘಕಾಲೀನ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ನೈನಿತಾಲ್, ಮಸ್ಸೂರಿ ಮತ್ತು ಗರ್‌ವಾಲ್‌ ಇತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಬಹುದು ಎಂದು ತಜ್ಞರು ಹೇಳಿದರು.

ADVERTISEMENT

‘ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ. ವಿನಾಶಕ್ಕೆ ಕಾರಣವಾಗುವ ದೊಡ್ಡ ಯೋಜನೆಗಳನ್ನು ನಿಯಂತ್ರಿಸಬೇಕು. ಚಾರ್‌ಧಾಮ್‌ ರೈಲ್ವೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ಹೆಚ್ಚಿನ ವಿನಾಶ ಉಂಟು ಮಾಡುತ್ತದೆ ಮತ್ತು ಪ್ರವಾಸಿ ರಾಜ್ಯ ಉತ್ತರಾಖಂಡಕ್ಕೆ ಮತ್ತಷ್ಟು ಹೊರೆಯಾಗಲಿದೆ ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಭೂಪ್ರದೇಶದ ಹಾನಿ ಕಡಿಮೆ ಮಾಡಲು ಚಾರ್ ಧಾಮ್ ರಸ್ತೆ ವಿಸ್ತರಣೆ ಯೋಜನೆಯಡಿ ರಸ್ತೆಯ ಅಗಲವನ್ನು ಮಧ್ಯಂತರ ಮಾನದಂಡಕ್ಕೆ ನಿಯಂತ್ರಿಸಬೇಕು, ಚಾರ್ ಧಾಮ್ ರೈಲ್ವೆ ಯೋಜನೆಯನ್ನು ಮರುಪರಿಶೀಲಿಸಬೇಕು ಎಂದು ಅದು ಹೇಳಿದೆ.

‘ಹಿಮಾಲಯನ್ ಬಿಕ್ಕಟ್ಟು’ ಎಂಬ ವಿಷಯ ಕುರಿತು ಚರ್ಚಿಸಲು ಆಯೋಜಿಸಲಾದ ದುಂಡುಮೇಜಿನ ಸಭೆಯಲ್ಲಿ ಕೇಂದ್ರದ ಚಾರ್ ಧಾಮ್ ಯೋಜನೆ ಕುರಿತು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಮಾಜಿ ಅಧ್ಯಕ್ಷ ರವಿ ಚೋಪ್ರಾ, ಮಾಜಿ ಸದಸ್ಯ ಹೇಮಂತ್ ಧ್ಯಾನಿ ಮತ್ತು ಇತರರು ಭಾಗವಹಿಸಿದ್ದರು ಎಂದು ಎಸ್‌ಜೆಎಂ ಸಹ ಸಂಚಾಲಕ ಅವಶ್ವಾನಿ ಮಹಾಜನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.