ನವದೆಹಲಿ: ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರಪ್ರದೇಶ ಒಳಗೊಂಡಂತೆ ವಾಯುವ್ಯ ಭಾರತದಲ್ಲಿ ಇನ್ನೂ 5 ದಿನ ಬಿಸಿಗಾಳಿ ಸಮಸ್ಯೆ ಇರಲಿದೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ.
ಬಿಸಿಗಾಳಿ ಬೀಸಲಿರುವ ಕಾರಣ ಮೇ 22ರವರೆಗೆ ದೆಹಲಿ, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ರಾಜಸ್ಥಾನ ಪ್ರಾಂತ್ಯಗಳಿಗೆ ಐಎಂಡಿ ‘ರೆಡ್ ಅಲರ್ಟ್’ ಘೋಷಿಸಿದೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಒಳಗೊಂಡಂತೆ ಮಕ್ಕಳು ಮತ್ತು ಹಿರಿಯರ ಬಗ್ಗೆ ತೀವ್ರ ಕಾಳಜಿ ವಹಿಸುವಂತೆ ಒತ್ತಾಯಿಸಿದೆ.
ಪೂರ್ವ ಹಾಗೂ ಕೇಂದ್ರೀಯ ಭಾರತ ವಲಯದಲ್ಲಿ ಇನ್ನೂ 3 ದಿನಗಳವರೆಗೆ ಬಿಸಿಗಾಳಿ ಬೀಸಲಿದೆ. ಈ ಸಂಬಂಧ ಪೂರ್ವ ರಾಜಸ್ಥಾನ, ಉತ್ತರಪ್ರದೇಶ ಮತ್ತು ಬಿಹಾರ ಪ್ರಾಂತ್ಯಗಳಿಗೆ ಮೇ 20ರವರೆಗೆ ಐಎಂಡಿ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಿದೆ.
ಗರಿಷ್ಠ ತಾಪಮಾನ ದಾಖಲು: ಉತ್ತರ ಭಾರತದ ರಾಜ್ಯಗಳು ಬಿಸಿಲಿನ ಬೇಗೆಯಿಂದ ತಲ್ಲಣಗೊಂಡಿರುವ ನಡುವೆಯೇ, ಶುಕ್ರವಾರ ಪಶ್ಚಿಮ ದೆಹಲಿಯ ನಜಫ್‌ಗಢದಲ್ಲಿ 47.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ದೇಶದಲ್ಲಿ ದಾಖಲಾದ ಈ ವರ್ಷದ ಅತ್ಯಂತ ಗರಿಷ್ಠ ಪ್ರಮಾಣದ ತಾಪಮಾನವಾಗಿದೆ.
ಹಿಂದೆಯೂ ಬೀಸಿದೆ ಬಿಸಿಗಾಳಿ: ಹವಾಮಾನ ವೈಪರೀತ್ಯದಿಂದಾಗಿ ಪ್ರತಿ 30 ವರ್ಷಗಳಿಗೊಮ್ಮೆ ಬಿಸಿಗಾಳಿ ಸಮಸ್ಯೆ ತಲೆದೋರಲಿದೆ. ಈ ಹಿಂದೆಯೂ ಸುಮಾರು 45 ಬಾರಿ ಇದೇ ರೀತಿಯ ಬಿಸಿಗಾಳಿ ಬೀಸಿದೆ ಎಂದು ಹವಾಮಾನ ತಜ್ಞರ ತಂಡವೊಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.