ಜೈಪುರ: ರಾಜಸ್ಥಾನದ ಭಾರತ್‌ಪುರ ಜಿಲ್ಲೆಯ ಡೀಗ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಸ್ವಾಮೀಜಿ ಒಬ್ಬರು ಬೆಂಕಿ ಹಚ್ಚಿಕೊಂಡಿದ್ದಾರೆ. ಒಂದು ದಿನದ ಹಿಂದಷ್ಟೇ ಮತ್ತೊಬ್ಬ ಸ್ವಾಮೀಜಿ ಕಲ್ಲು ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯಿಸಿ ಮೊಬೈಲ್ ಟವರ್ ಏರಿ ಕುಳಿತಿದ್ದರು.
ಶಾಂತಿ ಮಾತುಕತೆಯ ಭರವಸೆ ಮೇಲೆ ಟವರ್ ಏರಿ ಕುಳಿತಿದ್ದ ಸ್ವಾಮೀಜಿ ಕೆಳಗಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
'ಪ್ರತಿಭಟನೆ ವೇಳೆ ಹೊರಗೆ ನಿಂತಿದ್ದ ವಿಜಯ ದಾಸ್ ಹೆಸರಿನ ಸ್ವಾಮೀಜಿ ಇದ್ದಕ್ಕಿದ್ದಂತೆ ಬೆಂಕಿ ಹಚ್ಚಿಕೊಂಡರು. ತಕ್ಷಣ ರಕ್ಷಣೆಗೆ ಧಾವಿಸಿದ ಪೊಲೀಸರು ಕಂಬಳಿಯನ್ನು ಹೊದಿಸಿ ಬೆಂಕಿಯನ್ನು ಆರಿಸಲು ಯತ್ನಿಸಿದರು. ಗಾಯಗೊಂಡಿರುವ ಸ್ವಾಮೀಜಿಯನ್ನು ಭಾರತ್‌ಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ನಾರಾಯಣ ದಾಸ್ ಹೆಸರಿನ ಸ್ವಾಮೀಜಿ ಮಂಗಳವಾರ ಟವರ್ ಏರಿ ಕುಳಿತಿದ್ದುದು ಡೀಗ ಪ್ರದೇಶದಲ್ಲಿ ದೊಡ್ಡ ಪ್ರಹಸನವಾಗಿ ಕಂಡುಬಂದಿತ್ತು. ಬುಧವಾರ ಮತ್ತೊಬ್ಬ ಸ್ವಾಮೀಜಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದರಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
ಡೀಗ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಸಿ ಕೆಲವು ದಿನಗಳಿಂದ ಈ ಇಬ್ಬರು ಸ್ವಾಮೀಜಿಗಳು ಸೇರಿದಂತೆ ಮತ್ತಿತರರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.