ADVERTISEMENT

ಟಿಪ್ಪು ಸುಲ್ತಾನ್‌ ಚಿತ್ರ | ಕೊಲ್ಹಾಪುರ: ಪ್ರತಿಭಟನೆ ವೇಳೆ ಕಲ್ಲು ತೂರಾಟ, ನಿಷೇಧಾಜ್ಞೆ

‘ಸ್ಟೇಟಸ್‌’ನಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡು ಹಾಕಿದ್ದ ಆರೋಪ

ಪಿಟಿಐ
Published 7 ಜೂನ್ 2023, 16:05 IST
Last Updated 7 ಜೂನ್ 2023, 16:05 IST
ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ಹಾಕಲಾಗಿತ್ತು ಎಂದು ಆರೋಪಿಸಿ ಕೊಲ್ಹಾಪುರದಲ್ಲಿ ಜನರು ಬುಧವಾರ ಪ್ರತಿಭಟಿಸಿದರು  –ಪಿಟಿಐ ಚಿತ್ರ 
ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ಹಾಕಲಾಗಿತ್ತು ಎಂದು ಆರೋಪಿಸಿ ಕೊಲ್ಹಾಪುರದಲ್ಲಿ ಜನರು ಬುಧವಾರ ಪ್ರತಿಭಟಿಸಿದರು  –ಪಿಟಿಐ ಚಿತ್ರ     

ಮುಂಬೈ(ಪಿಟಿಐ): ವ್ಯಕ್ತಿಗಳಿಬ್ಬರು ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ತಮ್ಮ ಸಾಮಾಜಿಕ ಮಾಧ್ಯಮದ ‘ಸ್ಟೇಟಸ್’ನಲ್ಲಿ ಹಾಕಿದ್ದರು ಎನ್ನಲಾದ ವಿಚಾರವಾಗಿ ಕೊಲ್ಹಾಪುರದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ, ಕಲ್ಲು ತೂರಾಟ ನಡೆದಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ನಗರದಲ್ಲಿ ಜೂನ್ 19ರ ವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ.

ರಾಜ್ಯ ಮೀಸಲು ಪೊಲೀಸ್‌ ಪಡೆ (ಎಸ್‌ಆರ್‌ಪಿಎಫ್‌)ಯ ಸಿಬ್ಬಂದಿಯನ್ನು ನಿಯೋಜಿಸಿ, ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ನೆರೆಯ ಸಾತಾರರಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಂಜೆ ವರೆಗೆ ಅಥವಾ ಪರಿಸ್ಥಿತಿಗೆ ಅನುಗುಣವಾಗಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆ ವಿವರ: ಇಬ್ಬರು ಮಂಗಳವಾರ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ತಮ್ಮ ಸಾಮಾಜಿಕ ಮಾಧ್ಯಮದ ಸ್ಟೇಟಸ್‌ನಲ್ಲಿ ಪೋಸ್ಟ್‌ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಬಲಪಂಥೀಯ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿ, ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದರು.

ಇದರ ಬೆನ್ನಲ್ಲೇ, ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ, ಪ್ರತಿಭಟನೆ ತೀವ್ರಗೊಂಡಾಗ ಅದೇ ದಿನ ಸಂಜೆ ಮತ್ತೊಂದು ಎಫ್‌ಐಆರ್‌ ದಾಖಲಿಸಿದ ಪೊಲೀಸರು, ಐವರನ್ನು ಬಂಧಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಮತ್ತೆ ಬೀದಿಗಿಳಿದ ಹೋರಾಟಗಾರರು, ನಗರದ ಶಿವಾಜಿ ಚೌಕ ಬಳಿ ಜಮಾಯಿಸಿ ಪ್ರತಿಭಟಿಸಿದರು.

‘ಕೆಲ ಸಂಘಟನೆಗಳು ಕೊಲ್ಹಾಪುರ ಬಂದ್‌ಗೆ ಕರೆ ನೀಡಿದರು. ಟಿಪ್ಪು ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ಸ್ಟೇಟಸ್‌ನಲ್ಲಿ ಹಾಕಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಕಾರರಿಗೆ ನಾನು ಮಾಹಿತಿ ನೀಡಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ ಹೇಳಿದ್ದಾರೆ.

‘ಶಿವಾಜಿ ಚೌಕದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿ, ಪ್ರತಿಭಟನಕಾರರು ಸ್ಥಳದಿಂದ ಹೊರಡುತ್ತಿದ್ದಾಗ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ಆರಂಭಿಸಿದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಶೆಲ್‌ ಸಿಡಿಸಿದರು’ ಎಂದು ವಿವರಿಸಿದ್ದಾರೆ.

‘ದುಷ್ಕರ್ಮಿಗಳನ್ನು ಪತ್ತೆ , ವಶಕ್ಕೆ ಪಡೆಯಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದೂ ಪಂಡಿತ ತಿಳಿಸಿದ್ದಾರೆ.

‘ಅಭಿವೃದ್ಧಿ ವಿಷಯದಲ್ಲಿ ಕೊಲ್ಹಾಪುರ ಜಿಲ್ಲೆ ಪ್ರಸಿದ್ಧಿಯಾಗಿದೆ. ಈ ಖ್ಯಾತಿಗೆ ಧಕ್ಕೆ ತರುವ ಕೆಲಸ ಮಾಡದಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ. ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಕೇಳಿಕೊಳ್ಳುತ್ತೇನೆ’ ಎಂದು ಜಿಲ್ಲಾಧಿಕಾರಿ ರಾಹುಲ್‌ ರೇಖಾವರ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ಹಾಕಲಾಗಿತ್ತು ಎಂದು ಆರೋಪಿಸಿ ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿದ ಜನರನ್ನು ಚದುರಿಸಲು ಪೊಲೀಸರು ಬುಧವಾರ ಲಾಠಿ ಬೀಸಿದರು  –ಪಿಟಿಐ ಚಿತ್ರ 
ಟಿಪ್ಪು ಸುಲ್ತಾನ್ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡನ್ನು ತಮ್ಮ ಸಾಮಾಜಿಕ ಮಾಧ್ಯಮದ ಸ್ಟೇಟಸ್‌ನಲ್ಲಿ ಹಾಕಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ
ದೀಪಕ್ ಕೇಸರಕರ್ ಕೊಲ್ಹಾಪುರ ಜಿಲ್ಲಾ ಉಸ್ತುವಾರಿ ಸಚಿವ

ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು

ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕೊಲ್ಹಾಪುರ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಶಾಂತಿ–ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜನರು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು. ಈ ಘಟನೆ ನಡೆದಿರುವುದು ದುರದೃಷ್ಟಕರ. ಪೊಲೀಸರು ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು –ಏಕನಾಥ ಶಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ

ಸಣ್ಣ ಘಟನೆಗಳಿಗೂ ಧಾರ್ಮಿಕ ಬಣ್ಣ

ಪವಾರ್ ಔರಂಗಾಬಾದ್ (ಪಿಟಿಐ): ಮಹಾರಾಷ್ಟ್ರದಲ್ಲಿ ಕೆಲ ಸಣ್ಣ ಘಟನೆಗಳಿಗೂ ಧಾರ್ಮಿಕ ಬಣ್ಣ ಹಚ್ಚುವ ಪ್ರಯತ್ನಗಳು ನಡೆಯತ್ತಿದ್ದು ಆಡಳಿತಾರೂಢ ಪಕ್ಷಗಳು ಇದಕ್ಕೆ ಪ್ರೋತ್ಸಾಹ ನೀಡುತ್ತಿವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಬುಧವಾರ ಹೇಳಿದ್ದಾರೆ. ಅಹ್ಮದ್‌ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಕೆಲ ಯುವಕರು ಮೊಘಲರ ದೊರೆ ಔರಂಗಜೇಬ ಭಾವಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು. ಸಾಮಾಜಿಕ ಮಾಧ್ಯಮದ ಸ್ಟೇಟಸ್‌ನಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡು ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಕಾರಣ ಪವಾರ್‌ ಈ ಹೇಳಿಕೆ ನೀಡಿದ್ದಾರೆ. ‘ಕಾನೂನು–ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆಡಳಿತ ಪಕ್ಷಗಳ ಜನರು ಹಾಗೂ ಅವರ ಬೆಂಬಲಿಗರು ಈ ವಿಚಾರವಾಗಿ ಬೀದಿಗಿಳಿದು ಎರಡು ಧರ್ಮಗಳ ಮಧ್ಯೆ ಒಡಕು ಮೂಡಿಸುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು. ಔರಂಗಜೇಬ ವೈಭವೀಕರಣ ಸಹಿಸಲಾಗದು: ಫಡಣವೀಸ್ ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ಮೊಘಲರ ದೊರೆ ಔರಂಗಜೇಬನ ವೈಭವೀಕರಣ ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ದೇವೇಂದ್ರ ಫಡಣವೀಸ್‌ ಬುಧವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕೆಲ ರಾಜಕೀಯ ಮುಖಂಡರು ರಾಜ್ಯದಲ್ಲಿ ಗಲಭೆಯಂತಹ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಒಂದು ಸಮುದಾಯಕ್ಕೆ ಸೇರಿದ ಕೆಲವರು ಔರಂಗಜೇಬ ಹಾಗೂ ಟಿಪ್ಪು ಸುಲ್ತಾನ್‌ನನ್ನು ವೈಭವೀಕರಿಸುತ್ತಾರೆ. ಇಂಥ ಬೆಳವಣಿಗೆಗಳು ಕಾಕತಾಳೀಯವಲ್ಲ’ ಎಂದರು. ‘ಒಂದು ವರ್ಗದ ಯುವಕರನ್ನು ಪ್ರಚೋದಿಸಲಾಗುತ್ತಿದ್ದು ಕುರಿತು ತನಿಖೆ ನಡೆಸಲಾಗುವುದು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.