ADVERTISEMENT

ದೇಶ ವಿಭಜನೆ ಸಂಕಥನ ನಿಲ್ಲಿಸಿ: ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್‌, ಕರ್ನಾಟಕ ಸರ್ಕಾರದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

ಪಿಟಿಐ
Published 7 ಫೆಬ್ರುವರಿ 2024, 15:35 IST
Last Updated 7 ಫೆಬ್ರುವರಿ 2024, 15:35 IST
ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದರು –ಪಿಟಿಐ ಚಿತ್ರ 
ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದರು –ಪಿಟಿಐ ಚಿತ್ರ     

ನವದೆಹಲಿ: ದೇಶವನ್ನು ಉತ್ತರ ಮತ್ತು ದಕ್ಷಿಣ ಎಂಬುದಾಗಿ ವಿಭಜಿಸುವಂತಹ ಸಂಕಥನ ಸೃಷ್ಟಿಸುವುದನ್ನು ನಿಲ್ಲಿಸುವಂತೆ ಕಾಂಗ್ರೆಸ್‌ ಹಾಗೂ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ ಪ್ರಧಾನಿ ನರೇಂದ್ರ ಮೋದಿ, ಇಂಥ ನಡೆಯಿಂದ ದೇಶದ ಭವಿಷ್ಯ ಗಂಡಾಂತರಕ್ಕೆ ಸಿಲುಕಲಿದೆ ಎಂದು ಹೇಳಿದರು.

ಬಜೆಟ್‌ ಅಧಿವೇಶನ ಅಂಗವಾಗಿ, ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ‘ದೇಶವನ್ನು ಉತ್ತರ ಮತ್ತು ದಕ್ಷಿಣ ಎಂಬುದಾಗಿ ಬಿಂಬಿಸುವಂತಹ ಜಾಹೀರಾತುಗಳನ್ನು ನೀಡುವ ಮೂಲಕ ಕರ್ನಾಟಕ ಸರ್ಕಾರ ಇಂತಹ ಸಂಕಥನ ನಿರ್ಮಿಸುತ್ತಿದೆ’ ಎಂದರು.

ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಕೈಗೊಂಡಿರುವ ಪ್ರತಿಭಟನೆ ಕುರಿತು ವಾಗ್ದಾಳಿ ನಡೆಸಿದರು. 

ADVERTISEMENT

90 ನಿಮಿಷ ಮಾತನಾಡಿದ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಕೂಡ ವಿವರಿಸಿದರು.

‘ನನ್ನ ತೆರಿಗೆ, ನನ್ನ ಹಣ (ನನ್ನ ತೆರಿಗೆ, ನನ್ನ ಹಕ್ಕು) ಎಂಬ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲಾಗುತ್ತಿದೆ. ದೇಶವನ್ನು ಒಡೆಯುವ ಈ ಹೊಸ ಸಂಕಥನಕ್ಕೆ ರಾಜ್ಯ ಸರ್ಕಾರವೊಂದರ ಬೆಂಬಲವಿದೆ. ರಾಷ್ಟ್ರೀಯ ಪಕ್ಷವೊಂದರಿಂದ ಇಂತಹ ವಿಚಾರ ಬರುತ್ತಿರುವುದು ನೋವಿನ ಸಂಗತಿ’ ಎಂದರು.

‘ಈ ವಿಷಯ ಕುರಿತು ಬಹಳ ನೋವಿನಿಂದ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ರಾಜಕೀಯ ಲಾಭಗಳಿಗಾಗಿ, ಇತ್ತೀಚಿನ ದಿನಗಳಲ್ಲಿ ದೇಶವನ್ನು ಒಡೆಯುವಂತಹ ಮಾತುಗಳನ್ನಾಡಲಾಗುತ್ತಿದೆ. ಇಡೀ ಒಂದು ರಾಜ್ಯವೇ ಇಂತಹ ಭಾಷೆಯಲ್ಲಿ ಮಾತನಾಡುತ್ತಿದೆ. ಈ ದೇಶಕ್ಕೆ ಇದಕ್ಕಿಂತ ಘೋರವಾದುದು ಏನೂ ಇಲ್ಲ’ ಎಂದು ಹೇಳಿದರು.

‘ಜಾರ್ಖಂಡ್‌ನ ಕ್ರೀಡಾಪಟುವೊಬ್ಬರು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದರೆ, ಅದು ಈಶಾನ್ಯ ಭಾಗದ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೇ ಗೌರವದ ವಿಷಯ. ಹಿಮಾಲಯದಲ್ಲಿ ಹುಟ್ಟಿ ಹರಿಯುವ ನದಿ ನೀರನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡುವುದಿಲ್ಲ ಎಂದು ಯಾರಾದರೂ ಹೇಳಿದರೆ, ಆಗ ದೇಶದ ಗತಿ ಏನು? ಇಂತಹ ಮಾತುಗಳಿಗೆ ಕೊನೆ ಬೇಡವೇ?’ ಎಂದು ಹೇಳಿದರು.

‘ಕಲ್ಲಿದ್ದಲು ನಿಕ್ಷೇಪಗಳಿಂದ ಸಂಪದ್ಭರಿತ ರಾಜ್ಯವೊಂದು, ಈ ಪ್ರಾಕೃತಿಕ ಸಂಪತ್ತನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದರೆ? ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ, ಈಶಾನ್ಯ ರಾಜ್ಯಗಳು ತಮ್ಮಲ್ಲಿ ಉತ್ಪಾದನೆಯಾದ ಆಮ್ಲಜನಕವನ್ನು ಇತರ ಭಾಗಗಳಿಗೆ ಕೊಡುವುದಿಲ್ಲ ಎಂದು ಹೇಳಿದ್ದರೆ ಏನಾಗುತ್ತಿತ್ತು’ ಎಂದು ಹರಿತ ಮಾತುಗಳಲ್ಲಿ ಹೇಳಿದರು.

‘ಭಾರತ ನಮ್ಮ ಪಾಲಿಗೆ ತುಂಡು ಭೂಮಿಯಲ್ಲ. ಇದು ಮಾನವನ ದೇಹವಿದ್ದಂತೆ. ಪಾದಕ್ಕೆ ಮುಳ್ಳು ಚುಚ್ಚಿದಾಗ, ಅದು ಕಾಲಿಗೆ ಚುಚ್ಚಿದ್ದು ನನಗೆ ಸಂಬಂಧವಿಲ್ಲ ಎಂದು ಕೈ ಹೇಳುವುದಿಲ್ಲ. ಅದೇ ರೀತಿ, ದೇಶದ ಯಾವುದೇ ಭಾಗದಲ್ಲಿ ಕಂಡುಬರುವ ನೋವನ್ನು ಪ್ರತಿಯೊಬ್ಬ ಪ್ರಜೆಯೂ ಅನುಭವಿಸುತ್ತಾನೆ’ ಎಂದರು. 

ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದರು –ಪಿಟಿಐ ಚಿತ್ರ 

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಒಕ್ಕೂಟ ವ್ಯವಸ್ಥೆಯನ್ನು ಹತ್ಯೆ ಮಾಡಿ ಕೈಗಳಿಗೆ ರಕ್ತ ಮೆತ್ತಿಕೊಂಡಿರುವ ವ್ಯಕ್ತಿಯು  ಒಕ್ಕೂಟ ವ್ಯವಸ್ಥೆ ಬಗ್ಗೆ ಟೊಳ್ಳು ಮಾತುಗಳನ್ನಾಡಿದಂತಿತ್ತು

-ಡೆರೆಕ್‌ ಒಬ್ರಯಾನ್ ಟಿಎಂಸಿ ರಾಜ್ಯಸಭಾ ಸದಸ್ಯ

ಪ್ರಧಾನಿಯವರು ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಟೀಕೆ ಮಾಡುವ ಬದಲು ಕಳೆದ 10 ವರ್ಷಗಳ ಅವಧಿಯಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಹೇಳಬೇಕಿತ್ತು

-ಪ್ರಿಯಾಂಕಾ ಚತುರ್ವೇದಿ ರಾಜ್ಯಸಭೆ ಸದಸ್ಯೆ ಶಿವಸೇನಾ (ಯುಬಿಟಿ) 

ದೇಶದ ಒಂದು ಪ್ರದೇಶದಲ್ಲಿ ತಯಾರಿಸಲಾಗುವ ಲಸಿಕೆಯನ್ನು ಮತ್ತೊಂದು ಭಾಗಕ್ಕೆ ಕೊಡುವುದಿಲ್ಲ ಎಂದು ಯಾರಾದರೂ ಹೇಳಲು ಸಾಧ್ಯವೇ? ಇದು ಎಂತಹ ಯೋಚನೆ

-ನರೇಂದ್ರ ಮೋದಿ ಪ್ರಧಾನಿ

40 ಸ್ಥಾನ ಉಳಿಸಿಕೊಳ್ಳುವಂತೆ ಪ್ರಾರ್ಥಿಸುವೆ: ಕಾಂಗ್ರೆಸ್‌ ಕುಟುಕಿದ ಮೋದಿ

ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದ ಮೋದಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳ ನಾಯಕರು ಆಡಿದ ಮಾತುಗಳನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕುಟುಕಿದರು. ‘ಲೋಕಸಭಾ ಚುನಾವಣೆಗಳಲ್ಲಿ 40 ಸ್ಥಾನಗಳ ಗಡಿ ದಾಟಲು ಕಾಂಗ್ರೆಸ್‌ ಪಕ್ಷ ಹೆಣಗಾಡಲಿದೆ ಎಂಬುದಾಗಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷ ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಿಂದ ನಿಮಗೆ ಸವಾಲು ಒಡ್ಡಲಾಗಿದೆ. ಆದರೆ ನೀವು 40 ಸ್ಥಾನಗಳನ್ನು ಗೆಲ್ಲುವಂತಾಗಲಿದೆ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಮೋದಿ ಹೇಳಿದರು. ‘ಕಾಂಗ್ರೆಸ್ ಈಗ ಹಳತಾದ ಪಕ್ಷವಾಗಿದ್ದು ತನ್ನ ಸಂಘಟನಾ ಕಾರ್ಯವನ್ನು ಹೊರಗುತ್ತಿಗೆಗೆ ನೀಡಿದೆ ಎಂಬುದು ನನಗೆ ಮನವರಿಕೆಯಾಗಿದೆ’ ಎಂದು ಛೇಡಿಸಿದರು. ‘ಹಲವು ದಶಕಗಳ ಕಾಲ ದೇಶವನ್ನು ಆಳಿದ ಪಕ್ಷ ಅಧೋಗತಿಗೆ ಇಳಿಯುತ್ತಿದೆ. ಇದು ನಮಗೆ ಖುಷಿ ತರುವ ಸಂಗತಿಯಲ್ಲ. ನಿಮ್ಮ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ರೋಗಿಯೇ.... ಮಾಡಿಕೊಂಡಾಗ ವೈದ್ಯರು ಏನು ಮಾಡಲು ಸಾಧ್ಯ? ಇದರ ಬಗ್ಗೆ ಹೆಚ್ಚಿಗೆ ಏನು ಹೇಳಲಿ?’ ಎಂದು ವ್ಯಂಗ್ಯವಾಡಿದರು. ‘ರಾಜ್ಯಸಭೆಯಲ್ಲಿ ಸುದೀರ್ಘ ಅವಧಿಗೆ ಮಾತನಾಡಲು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಲಭಿಸಿತು. ಆದರೆ ತನಗೆ ಇಂತಹ ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂಬ ಬಗ್ಗೆ ಸ್ವತಃ ಖರ್ಗೆ ಅವರಿಗೆ ಅಚ್ಚರಿಯಾಗಿದೆ’ ಎಂದು ಹೇಳಿದರು. ರಾಹುಲ್‌ ಗಾಂಧಿ ವಿರುದ್ಧವೂ ಟೀಕೆ ಮಾಡಿದ ಮೋದಿ ‘ಕಾಂಗ್ರೆಸ್‌ ಪಕ್ಷ ತನ್ನ ಯುವರಾಜನಿಗಾಗಿ ಸ್ಟಾರ್ಟ್ ಅಪ್‌ಗೆ ಪ್ರಯತ್ನಿಸುತ್ತಿದೆ. ಆದರೆ ಅದಕ್ಕೆ ಚಾಲನೆಯೇ ಸಿಗುತ್ತಿಲ್ಲ’ ಎಂದರು.

ಮೂರನೇ ಅವಧಿಗೆ ಸರ್ಕಾರ: ಮೋದಿ ವಿಶ್ವಾಸ

ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಭಾರಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ‘ ಮೂರನೇ ಅವಧಿಯಲ್ಲಿ ನಮ್ಮ ಸರ್ಕಾರವು ತನ್ನೆಲ್ಲ ಶಕ್ತಿ ಬಳಸಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಿದೆ’ ಎಂದರು. ‘ಸಬ್‌ ಕಾ ಸಾಥ್‌ ಎಂಬುದು ಕೇವಲ ಘೋಷಣೆಯಲ್ಲ; ಅದು ಮೋದಿಯ ಗ್ಯಾರಂಟಿ. ಮೂರನೇ ಅವಧಿಗೆ ನಮ್ಮ ಸರ್ಕಾರ ಅಧಿಕಾರಕ್ಕೇರುವ ದಿನಗಳು ದೂರ ಇಲ್ಲ ಕೆಲವರು ಈ ಮೂರನೇ ಅವಧಿಯ ಸರ್ಕಾರವನ್ನು ಮೋದಿ 3.0 ಸರ್ಕಾರ ಎಂದು ಕರೆಯುತ್ತಾರೆ’ ಎಂದರು. ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ದೇಶದ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ ಎಂದು ಟೀಕಿಸಿದ ಅವರು ಹತ್ತು ವರ್ಷಗಳಲ್ಲಿ ತಮ್ಮ ಸರ್ಕಾರ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ಗೆ ಹೆದರಿದ್ದಾರೆ ಎಂಬುದನ್ನು ಅವರ ಭಾಷಣವೇ ತೋರಿಸುತ್ತದೆ. ಜವಾಹರಲಾಲ್‌ ನೆಹರೂ ಅವರ ಬಗ್ಗೆ ತಿಳಿದುಕೊಳ್ಳಲು ಮೋದಿ ಅಧ್ಯಯನ ನಡೆಸುವ ಅಗತ್ಯವಿದೆ. ಮೀಸಲಾತಿ ಸೌಲಭ್ಯ ಕೊಟ್ಟವರು ಯಾರು? ಮೀಸಲಾತಿ ಕುರಿತು ಆರ್‌ಎಸ್‌ಎಸ್‌ನ ನಿಲುವು ಏನು ಎಂಬುದು ಪ್ರಧಾನಿ ಮೋದಿ ಅವರಿಗೆ ಗೊತ್ತಿದೆಯೇ?

-ಕೆ.ಸಿ.ವೇಣುಗೋಪಾಲ್‌ ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.