ADVERTISEMENT

ಪರವಾನಗಿ ಅಮಾನತು | 14 ಉತ್ಪನ್ನಗಳ ಮಾರಾಟ ಸ್ಥಗಿತ: ‘ಸುಪ್ರೀಂ’ಗೆ ಪತಂಜಲಿ ಹೇಳಿಕೆ

ಪಿಟಿಐ
Published 9 ಜುಲೈ 2024, 15:38 IST
Last Updated 9 ಜುಲೈ 2024, 15:38 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ನವದೆಹಲಿ: ಉತ್ತರಾಖಂಡ ರಾಜ್ಯದ ಪರವಾನಗಿ ಪ್ರಾಧಿಕಾರವು ಏಪ್ರಿಲ್‌ನಲ್ಲಿ ಉತ್ಪಾದನಾ ಪರವಾನಗಿ ಅಮಾನತುಗೊಳಿಸಿದ್ದರಿಂದ 14 ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್‌ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ 5,606 ಫ್ರಾಂಚೈಸ್ ಸ್ಟೋರ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಕಂಪನಿಯು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಿದೆ.

ADVERTISEMENT

ಅಲ್ಲದೆ, ಈ 14 ಉತ್ಪನ್ನಗಳ ಜಾಹೀರಾತುಗಳನ್ನು ಎಲ್ಲ ಮಾಧ್ಯಮ ವೇದಿಕೆಗಳಿಂದಲೂ ಹಿಂಪಡೆಯಲು ಸೂಚನೆ ನೀಡಲಾಗಿದೆ ಎಂದು ಅದು ಹೇಳಿದೆ.

ಜಾಹೀರಾತುಗಳನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳಿಗೆ ಮಾಡಿದ ಮನವಿಯನ್ನು ಅಂಗೀಕರಿಸಲಾಗಿದೆಯೇ ಮತ್ತು ಈ 14 ಉತ್ಪನ್ನಗಳ ಜಾಹೀರಾತುಗಳನ್ನು ಹಿಂಪಡೆಯಲಾಗಿದೆಯೇ ಎನ್ನುವುದರ ಕುರಿತು ಎರಡು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಪೀಠವು, ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸೂಚಿಸಿತು.

ಪೀಠವು ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.

ಕೋವಿಡ್ ಲಸಿಕಾ ಅಭಿಯಾನ ಮತ್ತು ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ಪತಂಜಲಿ ನಡೆಸಿದ ಅಪಪ್ರಚಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ದಿಕ್ಕು ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ನೀಡಲಾದ ನ್ಯಾಯಾಂಗ ನಿಂದನೆ ನೋಟಿಸ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಮೇ 14 ರಂದು ಕಾಯ್ದಿರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.