ADVERTISEMENT

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ಮೊದಲ ಭೇಟಿ ಇಂದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 20:07 IST
Last Updated 30 ಏಪ್ರಿಲ್ 2024, 20:07 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಬುಧವಾರ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. 

ಆದಿವಾಸಿ ಎಂಬ ಕಾರಣಕ್ಕೆ ಅಯೋಧ್ಯೆಯ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿ ಮಂದಿರ ಭೇಟಿ ಮಹತ್ವದ್ದಾಗಿದೆ.

ಶ್ರೀ ಹನುಮಾನ್ ಗಢಿ ದೇವಸ್ಥಾನ, ಪ್ರಭು ಶ್ರೀರಾಮ ದೇವಸ್ಥಾನ ಹಾಗೂ ಕುಬೇರ್‌ ಟೀಲಾಗೆ ಭೇಟಿ ನೀಡಲಿರುವ ದ್ರೌಪದಿ ಮುರ್ಮು ಅವರು ದರ್ಶನ ಪಡೆದು, ಆರತಿ ನೆರವೇರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. 

ADVERTISEMENT

ಜನವರಿ 22ರಂದು ಬಾಲರಾಮನ ಪ್ರತಿಷ್ಠಾಪನೆ ನೆರವೇರಿತ್ತು. 

ನೂತನ ಸಂಸತ್ ಭವನ ಉದ್ಘಾಟನೆಯಾದಾಗ ಹಾಗೂ ಬಾಲರಾಮನ ಪ್ರತಿಷ್ಠಾಪನೆ ನೆರವೇರಿದಾಗ, ರಾಷ್ಟ್ರಪತಿ ಅವರನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಹ್ವಾನಿಸಿರಲಿಲ್ಲ. ಅವರು ಆದಿವಾಸಿ ಎನ್ನುವುದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್‌ ಇತ್ತೀಚಿನ ಚುನಾವಣಾ ಭಾಷಣಗಳಲ್ಲೂ ಟೀಕಿಸಿತ್ತು. 

‘ಆರ್‌ಎಸ್‌ಎಸ್‌ ಕೈಗೊಂಬೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ದಲಿತ ವಿರೋಧಿ. ಅವರು ಆ ಕಾರಣಕ್ಕೇ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ದೇಶದ ಮೊದಲ ಪ್ರಜೆ ಎನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೇ ಆಹ್ವಾನಿಸಲಿಲ್ಲ. ರಾಮನಾಥ್ ಕೋವಿಂದ್ (ಮಾಜಿ ರಾಷ್ಟ್ರಪತಿ ) ಅವರನ್ನು ಕೂಡ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.