ADVERTISEMENT

‘ಇಂಡಿಯಾ’ ಸಭೆ: ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ?

ಎಐಸಿಸಿ ಅಧ್ಯಕ್ಷ ಹೆಸರು ಸೂಚಿಸಿದ ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:26 IST
Last Updated 19 ಡಿಸೆಂಬರ್ 2023, 16:26 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಘೋಷಿಸಬೇಕು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಮೈತ್ರಿಕೂಟದ ಸಭೆಯಲ್ಲಿ ಆಗ್ರಹಿಸಿದರು. ಆದರೆ ಖರ್ಗೆ ಅವರು, ‘ನಾವು ಮೊದಲು ಗೆಲ್ಲೋಣ, ನಂತರ (ಇಂತಹ ವಿಷಯಗಳನ್ನು) ತೀರ್ಮಾನಿಸೋಣ’ ಎಂದರು.

ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಸಂಚಾಲಕರನ್ನಾಗಿ ನೇಮಿಸುವ ಅಥವಾ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವವನ್ನು ಮಮತಾ ಅವರು ಸಭೆಯ ಮುಂದೆ ಇರಿಸಿದರು. ಇದಕ್ಕೆ ಕೇಜ್ರಿವಾಲ್ ಬೆಂಬಲ ಸೂಚಿಸಿದರು.

ADVERTISEMENT

ಮಮತಾ ಮತ್ತು ಕೇಜ್ರಿವಾಲ್ ಅವರ ಈ ನಡೆಯು ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ನಾಯಕರ ಆಶ್ಚರ್ಯಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಖರ್ಗೆ ಹೆಸರು ಪ್ರಸ್ತಾಪಿಸಿರುವುದು ಕೆಲವು ನಾಯಕರ ಅನುಮಾನಕ್ಕೆ ಕೂಡ ಕಾರಣವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾದರೆ ಉತ್ತಮ ಎಂಬ ಮಾತು ಈಚೆಗೆ ಬಂದಿತ್ತು. ನಿತೀಶ್ ಅವರನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಖರ್ಗೆ ಹೆಸರು ಪ್ರಸ್ತಾಪಿಸಲಾಗಿದೆ ಎಂದು ಕೆಲವರು ಭಾವಿಸಿದ್ದಾರೆ.

ಮೈತ್ರಿಕೂಟದ ಸದಸ್ಯ ಪಕ್ಷಗಳ ನಡುವೆ ಸೀಟು ಹಂಚಿಕೆಯು ಆದಷ್ಟು ಬೇಗ ಆಗಬೇಕು ಎಂಬ ಬೇಡಿಕೆಯು ಸಭೆಯಲ್ಲಿ ವ್ಯಕ್ತವಾಯಿತು. ಸೀಟು ಹಂಚಿಕೆಯು ಈ ತಿಂಗಳ 31ಕ್ಕೆ ಮೊದಲು ಅಂತಿಮವಾಗಬೇಕು ಎಂದು ಟಿಎಂಸಿ ಒತ್ತಾಯಿಸಿತು. ಸೀಟು ಹಂಚಿಕೆ ಜನವರಿ 15ಕ್ಕೆ ಮೊದಲು ಅಂತಿಮಗೊಂಡರೆ ಸಾಕು ಎಂದು ಇನ್ನು ಕೆಲವರು ಹೇಳಿದರು. 

ತಮ್ಮನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಬೇಕು ಎಂಬ ಪ್ರಸ್ತಾವ ಸಭೆಯಲ್ಲಿ ಬಂದಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಖರ್ಗೆ ಅವರು, ‘ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬುದನ್ನು ನಾನು ಅವರೆಲ್ಲರಿಗೂ ಹೇಳಿದ್ದೇನೆ... ನಾವು ಮೊದಲು ಗೆಲ್ಲೋಣ. ನಾವು ಎಲ್ಲರೂ ಒಟ್ಟಾಗಿ ಗೆಲ್ಲೋಣ. ನಂತರ ಇದರ ಬಗ್ಗೆ ತೀರ್ಮಾನಿಸೋಣ’ ಎಂದು ಉತ್ತರಿಸಿದರು.

ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು ಎಂದು ಕೇಜ್ರಿವಾಲ್ ಅವರು ಸಭೆಯಲ್ಲಿ ಹೇಳಿದರು. ಒಕ್ಕೂಟಕ್ಕೆ ಒಬ್ಬ ನಾಯಕ ಬೇಕು ಎಂಬ ಅಭಿಪ್ರಾಯವು ಮಮತಾ ಅವರ ಕಡೆಯಿಂದ ವ್ಯಕ್ತವಾಯಿತು. ಖರ್ಗೆ ಅವರು ವಿಶ್ವಾಸಾರ್ಹ ದಲಿತ ನಾಯಕ. ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಘೋಷಿಸಿದರೆ, ಒಳ್ಳೆಯ ಸಂದೇಶವೊಂದನ್ನು ರವಾನಿಸಿದಂತೆ ಆಗುತ್ತದೆ ಎಂದು ಕೂಡ ಮಮತಾ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

ಮಮತಾ ಅವರ ಸಲಹೆಗೆ ಕೇಜ್ರಿವಾಲ್ ಬೆಂಬಲ ಸೂಚಿಸಿದ ನಂತರ, ಖರ್ಗೆ ಅವರು ಈ ಚರ್ಚೆಗೆ ಅಂತ್ಯವಾಡಿದರು. ತಾವು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಮಾತ್ರ ಎಂದು ಖರ್ಗೆ ಅವರು ಸಭೆಗೆ ತಿಳಿಸಿದರು. ಮೈತ್ರಿಕೂಟದ ನಾಯಕ ಯಾರಿರಬೇಕು ಎಂಬುದನ್ನು ಚರ್ಚಿಸಲು ಇದು ಸೂಕ್ತವಾದ ಸಮಯವಲ್ಲ. ಬಿಜೆಪಿಯನ್ನು ಸೋಲಿಸಲು ಅನುಸರಿಸಬೇಕಿರುವ ಕಾರ್ಯತಂತ್ರ ಯಾವುದಿರಬೇಕು ಎಂಬುದನ್ನು ಚರ್ಚಿಸುವ ಅಗತ್ಯ ಇದೆ ಎಂದು ಖರ್ಗೆ ಅವರು ಸಭೆಗೆ ವಿವರಿಸಿದರು ಎಂದು ಮೂಲಗಳು ಹೇಳಿವೆ.

ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂಬ ವಿಚಾರವಾಗಿ ಎಲ್ಲ ನಾಯಕರಲ್ಲಿ ಒಮ್ಮತ ಮೂಡಿದೆ ಎಂದು ಗೊತ್ತಾಗಿದೆ. ಪ್ರತಿ ತಿಂಗಳೂ ಎಂಟರಿಂದ ಹತ್ತು ಸಾರ್ವಜನಿಕ ರ್‍ಯಾಲಿಗಳನ್ನು ಆಯೋಜಿಸಬೇಕು, ಸಂಸದರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ದೇಶದಾದ್ಯಂತ ಪ್ರತಿಭಟನೆ ನಡೆಸಬೇಕು ಎಂದು ಎಲ್ಲ ನಾಯಕರೂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ವಿಚಾರವಾಗಿ ಎಲ್ಲ ಪ್ರಮುಖರಲ್ಲಿ ಒಮ್ಮತ ಮೂಡಿದೆ ಎಂದು ಖರ್ಗೆ ಅವರು ತಿಳಿಸಿದರು. ಸೀಟು ಹಂಚಿಕೆ ಪ್ರಕ್ರಿಯೆಯನ್ನು ರಾಜ್ಯಗಳ ಮಟ್ಟದಲ್ಲಿ ಶೀಘ್ರವೇ ಆರಂಭಿಸಲಾಗುವುದು. ಅಲ್ಲಿ ಭಿನ್ನಾಭಿಪ್ರಾಯ ಮೂಡಿದಲ್ಲಿ, ಕೇಂದ್ರ ನಾಯಕರ ಹಂತದಲ್ಲಿ ಬಗೆಹರಿಸಿಕೊಳ್ಳಲಾಗುವುದು ಎಂದರು.

‘ರಾಜ್ಯಗಳ ಮಟ್ಟದಲ್ಲಿ ಕೆಲವು ಸಮಸ್ಯೆಗಳು ಇರಬಹುದು. ಉತ್ತರ ಪ್ರದೇಶ, ದೆಹಲಿ ಮತ್ತು ಪಂಜಾಬ್‌ನಲ್ಲಿ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕು’ ಎಂದು ಖರ್ಗೆ ಅವರು ಎಸ್‌ಪಿ ಮತ್ತು ಎಎಪಿ ಬಗ್ಗೆ ಉಲ್ಲೇಖಿಸಿ ಹೇಳಿದರು. ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಉದ್ಧವ್ ಠಾಕ್ರೆ ಮತ್ತು ಎಎಪಿಯ ಕೇಜ್ರಿವಾಲ್ ಅವರು ಸೀಟು ಹಂಚಿಕೆ ಮಾತುಕತೆಯು ತಕ್ಷಣವೇ ನಡೆಯಬೇಕು ಎಂಬ ಆಗ್ರಹ ಮಂಡಿಸಿದರು.

ನಮ್ಮ ಬಳಿ ಅಗತ್ಯ ಸಂಖ್ಯೆಯ ಸಂಸದರು ಇಲ್ಲದಿದ್ದರೆ, ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಮಾತನಾಡುವುದರಲ್ಲಿ ಏನು ಅರ್ಥವಿರುತ್ತದೆ? ಹೀಗಾಗಿ, ನಾವು ನಮ್ಮ ಸಂಖ್ಯಾ ಬಲವನ್ನು ಹೆಚ್ಚಿಸಬೇಕು.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಸಿಟ್ಟಿಗೆದ್ದ ನಿತೀಶ್ ಕುಮಾರ್

ನವದೆಹಲಿ:  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾತುಗಳನ್ನು ಅನುವಾದಿಸಿ ಹೇಳಬೇಕು ಎಂಬ ಬೇಡಿಕೆಯನ್ನು ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಡಿಎಂಕೆ ನಾಯಕರು ಇರಿಸಿದಾಗ, ನಿತೀಶ್ ಕುಮಾರ್ ತಾಳ್ಮೆ ಕಳೆದುಕೊಂಡು ರೇಗಿದರು ಎನ್ನಲಾಗಿದೆ.

ಡಿಎಂಕೆ ನಾಯಕರಾದ ಎಂ.ಕೆ. ಸ್ಟಾಲಿನ್ ಮತ್ತು ಟಿ.ಆರ್. ಬಾಲು ಅವರು ಸಭೆಯಲ್ಲಿ ಇದ್ದರು. ಡಿಎಂಕೆ ಪ್ರತಿನಿಧಿಗಳು ಈ ಬೇಡಿಕೆ ಇರಿಸಿದ ನಂತರದಲ್ಲಿ, ಆರ್‌ಜೆಡಿಯ ಮನೋಜ್ ಕೆ. ಝಾ ಅವರು ಅನುವಾದಿಸಲು ಆರಂಭಿಸಿದರು. ಆದರೆ, ಅನುವಾದ ಮಾಡುವ ಕೆಲಸ ಬೇಡ ಎಂದು ನಿತೀಶ್ ಅವರು ಝಾ ಅವರಿಗೆ ಸೂಚಿಸಿದರು ಎನ್ನಲಾಗಿದೆ.

‘ರಾಷ್ಟ್ರಭಾಷೆಯಾಗಿರುವ ಹಿಂದಿಯನ್ನು ಡಿಎಂಕೆ ನಾಯಕರು ಕಲಿಯಬೇಕು’ ಎಂದು ನಿತೀಶ್ ಅವರು ಹೇಳಿದರು. ದೇಶವು ಬ್ರಿಟಿಷರನ್ನು ಬಹಳ ಹಿಂದೆಯೇ ಹೊರಹಾಕಿದೆ, ವಸಾಹತುಶಾಹಿಯ ಪಳೆಯುಳಿಕೆಗಳನ್ನು ಕೂಡ ಹೊರಗೆಸೆಯಬೇಕು ಎಂದು ನಿತೀಶ್ ಹೇಳಿದರು ಎಂದು ಮೂಲಗಳು ತಿಳಿಸಿವೆ. ‘ನಾನು ಇಲ್ಲಿ ಯಾವುದೇ ಹುದ್ದೆಗಾಗಿ ಬಂದಿಲ್ಲ. ಆದರೂ ಕೆಲವರು ಸುಳ್ಳುಸುದ್ದಿ ಹರಡುತ್ತಿದ್ದಾರೆ’ ಎಂದ ನಿತೀಶ್, ತಮ್ಮ ಮಾತುಗಳ ಅನುವಾದಕ್ಕೆ ಅವಕಾಶ ಕೊಡಲಿಲ್ಲ ಎಂದು ಗೊತ್ತಾಗಿದೆ.

ನಿತೀಶ್ ಅವರು ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದರು. ಸಭೆಯಲ್ಲಿ ಅವರು ಮುಕ್ತವಾಗಿ ಭಾಗವಹಿಸಿದಂತೆ ಕಾಣಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.