ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯು 2014ಕ್ಕೂ ಮೊದಲು ಹೇಗಿತ್ತು, ಆ ಇಸವಿಯ ನಂತರದಲ್ಲಿ ಹೇಗಾಗಿದೆ ಎಂಬುದನ್ನು ಹೋಲಿಸಿ ತೋರಿಸುವ ಶ್ವೇತಪತ್ರವನ್ನು ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಕಾರಣ, ಸಂಸತ್ತಿನ ಬಜೆಟ್ ಅಧಿವೇಶನವು ಒಂದು ದಿನದ ಮಟ್ಟಿಗೆ ವಿಸ್ತರಣೆ ಆಗಲಿದೆ. ಅಂದರೆ, ಅಧಿವೇಶನವು ಶನಿವಾರ ಮುಗಿಯಲಿದೆ.
‘ಬಜೆಟ್ ಅಧಿವೇಶನವು ಶುಕ್ರವಾರದ ಬದಲಿಗೆ, ಶನಿವಾರ ಕೊನೆಗೊಳ್ಳಲಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಂಸದರು ಶನಿವಾರ ಕಲಾಪದಲ್ಲಿ ಪಾಲ್ಗೊಳ್ಳಲು ಒಪ್ಪದೆ ಇದ್ದರೆ, ಸೋಮವಾರ ಕಲಾಪಕ್ಕೆ ಬರಬೇಕಾಗುತ್ತದೆ ಎಂದು ಸಂಸತ್ತಿನ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ವಿರೋಧ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ. ಹೀಗಾಗಿ, ಶನಿವಾರ ಕಲಾಪ ನಡೆಸಲು ಒಪ್ಪಲಾಯಿತು ಎಂದು ಗೊತ್ತಾಗಿದೆ.
ಯುಪಿಎ ಆಡಳಿತ ಅವಧಿಯ ಆರ್ಥಿಕ ಸಂಕಷ್ಟಗಳು ಹಾಗೂ ಅದರ ನಕಾರಾತ್ಮಕ ಪರಿಣಾಮಗಳನ್ನು ಶ್ವೇತಪತ್ರವು ವಿವರಿಸಲಿದೆ ಎಂದು ಮೂಲಗಳು ತಿಳಿಸಿವೆ.
ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ಇಂತಹ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿಯ ಒಳಗಿನಿಂದಲೇ ಒತ್ತಡ ಇತ್ತು ಎನ್ನಲಾಗಿದೆ. ಆದರೆ ಆಗ ಅದಕ್ಕೆ ಮೋದಿ ಅವರು ಒಪ್ಪಿರಲಿಲ್ಲ. ಆಗ ಶ್ವೇತಪತ್ರ ಹೊರಡಿಸಿದರೆ ಮಾರುಕಟ್ಟೆ ಶಕ್ತಿಗಳ ವಿಶ್ವಾಸವೇ ಕುಂದಿಹೋಗುತ್ತದೆ ಎಂದು ಮೋದಿ ಅವರು ಹೇಳಿದ್ದರು ಎನ್ನಲಾಗಿದೆ.
ಈಗ ದೇಶದ ಅರ್ಥ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ ಎಂಬ ವಿಶ್ವಾಸ ಸರ್ಕಾರಕ್ಕೆ ಇರುವ ಕಾರಣ, ಶ್ವೇತಪತ್ರ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ. ಆದರೆ, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ರಾಜಕೀಯ ಲಾಭಕ್ಕಾಗಿ ಶ್ವೇತಪತ್ರ ಹೊರಡಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಭಾವಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.