ಕೊಚ್ಚಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ದಟ್ಟಣೆ ನಿರ್ವಹಣೆ ಹಾಗೂ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ಅಯ್ಯಪ್ಪ ದೇವಸ್ಥಾನ ಮಂಡಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕೆ.ನರೇಂದ್ರನ್ ಹಾಗೂ ಪಿ.ಜಿ.ಅಜಿತ್‌ಕುಮಾರ್ ಅವರಿದ್ದ ನ್ಯಾಯಪೀಠ ವಿಶೇಷ ವಿಚಾರಣೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪತ್ತನಂತ್ತಿಟ್ಟ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿತು.
ಕೋವಿಡ್–19ಗೆ ಸಂಬಂಧಿಸಿದ ನಿರ್ಬಂಧಗಳನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ಶಬರಿಮಲೆಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ, ಅಯ್ಯಪ್ಪ ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಪೀಠ ನಿರ್ದೇಶನ ನೀಡಿತು.
ಈ ಬಾರಿ ಪ್ರತಿದಿನ 75 ಸಾವಿರ ಜನರು ದೇವಸ್ಥಾನಕ್ಕೆ ಭೇಟಿ ನೀಡುವರು ಎಂದು ಅಂದಾಜಿಸಲಾಗಿದೆ. ಈ ದಟ್ಟಣೆ ನಿರ್ವಹಣೆ ಸಾಧ್ಯವಾಗುವಂತೆ ಯೋಜನೆ ರೂಪಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.
ಎರಡು ತಿಂಗಳ ಕಾಲ ನಡೆಯುವ ಮಂಡಲ–ಮಕರವಿಳಕ್ಕು ಯಾತ್ರೆ ನ.17ರಂದು ಆರಂಭವಾಗಿದೆ. ಈ ಧಾರ್ಮಿಕ ವಿಧಿ ಜನವರಿ 14ಕ್ಕೆ ಮುಕ್ತಾಯವಾಗಲಿದ್ದು, ಜ. 20ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.