ಮುಂಬೈ: ಪ್ರಸ್ತುತ ಬಡ್ಡಿದರಗಳು ಜನರಿಗೆ ‘ತೀರಾ ಕಷ್ಟಕರ’ ಎನಿಸಿವೆ. ಹೀಗಾಗಿ ಬಡ್ಡಿದರಗಳನ್ನು ಬ್ಯಾಂಕುಗಳು ಜನರ ಕೈಗೆಟುಕುವಂತೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಆಯೋಜಿಸಿದ್ದ ವಾರ್ಷಿಕ ವಹಿವಾಟು ಮತ್ತು ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಉದ್ಯಮಗಳು ಹೆಚ್ಚಾಗಬೇಕು. ಹೊಸ ವ್ಯವಸ್ಥೆಯಡಿ ಹೂಡಿಕೆ ಅಗತ್ಯವಿದೆ. ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡುವುದರಿಂದ ‘ವಿಕಸಿತ ಭಾರತ’ ಆಶಯವನ್ನು ಸಾಧಿಸಬಹುದು ಎಂದು ಹೇಳಿದರು.
‘ಉದ್ಯಮಗಳು ಹೆಚ್ಚಾಗಲು ಹಾಗೂ ಸಾಮರ್ಥ್ಯ ಹೆಚ್ಚಳಕ್ಕೆ ಬ್ಯಾಂಕ್‌ಗಳ ಬಡ್ಡಿ ದರಗಳು ಇನ್ನಷ್ಟು ಕೈಗೆಟುಕುವಂತಾಗಬೇಕು’ ಎಂದರು.
ಕಳೆದ ವಾರ ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಆರ್ಥಿಕ ಪ್ರಗತಿ ವೃದ್ಧಿಗೊಳಿಸಲು ಬಡ್ಡಿ ದರಗಳನ್ನು ಕಡಿಮೆ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಒತ್ತಾಯಿಸಿದ್ದರು. ಹಣಕಾಸು ನೀತಿ ನಿರ್ಧರಿಸುವಾಗ ಆಹಾರ ದರ ಗಮನಿಸುವಂತೆ ಅವರು ಸಲಹೆ ನೀಡಿದ್ದರು.
ಹೆಚ್ಚಿನ ವಾಣಿಜ್ಯ ಬ್ಯಾಂಕುಗಳು ನೇರವಾಗಿ ಅಥವಾ ಪರೋಕ್ಷವಾಗಿ ಆರ್‌ಬಿಐ ಬಡ್ಡಿದರಗಳಿಗೆ ಸಂಬಂಧಿಸಿವೆ. ಹೆಚ್ಚಿನ ಸಾಲಗಳಿಗೆ ರೆಪೋ ದರ ಬಾಹ್ಯ ಮಾನದಂಡವಾಗಿದೆ. ಹಣದುಬ್ಬರವು ಆರ್‌ಬಿಐನ ಸಾಧಾರಣ ಮಟ್ಟ ಶೇ 6ರಷ್ಟನ್ನು ಮೀರಿದೆ. ಇದು ಅಕ್ಟೋಬರ್‌ನಲ್ಲಿ ಶೇ 6.2 ಮೀರಿತ್ತು ಎಂದು ಸೀತಾರಾಮನ್ ಹೇಳಿದರು.
ಮೂರು ಅಥವಾ ನಾಲ್ಕು ಉತ್ಪನ್ನಗಳು ಪ್ರಸ್ತುತ ಹಣದುಬ್ಬರವನ್ನು ಹೆಚ್ಚಿಸುತ್ತಿವೆ. ಉಳಿದ ಪ್ರಮುಖ ಉತ್ಪನ್ನಗಳು ಶೇ 3 ಅಥವಾ ನಾಲ್ಕರ ಸಮಾಧಾನಕರ ಮಟ್ಟದಲ್ಲಿವೆ ಎಂದರು.
ಹಣದುಬ್ಬರವು ಸಾಮಾನ್ಯ ಮನುಷ್ಯನ ಮೇಲೆ ಸಂಕೀರ್ಣ ಪರಿಣಾಮ ಬೀರುತ್ತದೆ. ಸರ್ಕಾರವು ಖಾದ್ಯ ತೈಲಗಳು ಮತ್ತು ಕಾಳುಗಳನ್ನು ಪೂರೈಸುವ ಕ್ರಮ ಕುರಿತಂತೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಆಹಾರ ಧಾನ್ಯ ಪೂರೈಕೆಗೆ ಸಂಬಂಧಿಸಿದಂತೆ ಭಾರತವು ‘ಆಗಿಂದಾಗ್ಗೆ’ ತೊಂದರೆ ಅನುಭವಿಸಿದೆ. ಅನಿರೀಕ್ಷಿತ ಏರುಪೇರು ಕಡಿಮೆ ಮಾಡಲು ಸರ್ಕಾರವು ಸಂಗ್ರಹಣಾ ವ್ಯವಸ್ಥೆಗಳನ್ನು ಸುಧಾರಿಸುವತ್ತ ಗಮನಹರಿಸಿದೆ ಎಂದು ಹೇಳಿದರು.
ಪ್ರಗತಿಯ ವೇಗ ಕಡಿಮೆಯಾಗುತ್ತಿರುವ ಕಳವಳಕಾರಿ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರಕ್ಕೆ ದೇಸೀ ಹಾಗೂ ಜಾಗತಿಕ ಸವಾಲುಗಳ ಬಗ್ಗೆ ಎಚ್ಚರವಿದೆ. ಈ ಬಗ್ಗೆ ಆತಂಕ ಬೇಡ. ಸರ್ಕಾರದ ವಿತ್ತೀಯ ಸಂಯೋಜನೆಯು ಆರ್ಥಿಕ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ನಾನು ನಿರಾಕರಿಸುವೆ. ಪ್ರಗತಿಯೇ ಸರ್ಕಾರದ ಆದ್ಯತೆ’ ಎಂದು ಹೇಳಿದರು.
ಬ್ಯಾಂಕುಗಳು ತಮ್ಮ ಮುಖ್ಯ ಕೆಲಸವಾದ ಸಾಲ ವಿತರಣೆಯ ಬಗ್ಗೆ ಗಮನಹರಿಸಬೇಕು. ಜನರ ನಂಬಿಕೆ ಗಳಿಸಲು ಬ್ಯಾಂಕುಗಳು ಪಾರದರ್ಶಕತೆ, ನೈತಿಕತೆ ಮತ್ತು ಸ್ಪಷ್ಟ ಸಂವಹನಗಳಿಗೆ ಆದ್ಯತೆ ನೀಡಬೇಕು. ಉದ್ಯಮ ಸಾಲಗಳು ಹೆಚ್ಚು ಮುಖ್ಯ. ಎಂಎಸ್‌ಎಂಇ ಸಾಲ ನೀಡಿಕೆ ಗುರಿಯನ್ನು 2026ರ ಹಣಕಾಸು ವರ್ಷಕ್ಕೆ ₹ 6.12 ಲಕ್ಷ ಕೋಟಿ, 2027ಕ್ಕೆ ₹7 ಲಕ್ಷ ಕೋಟಿ ಹೊಂದುವಂತೆ ಸಲಹೆ ನೀಡಿದ ಅವರು, 2025ಕ್ಕೆ ₹ 5.75 ಲಕ್ಷ ಕೋಟಿ ಸಾಲ ನೀಡುವಂತೆ ತಿಳಿಸಿದರು.
ಖಾತೆ ತೆರೆಯುವ ಗುರಿಯನ್ನು ಸಾಧಿಸಿದ ನಂತರ ಉಳಿತಾಯವನ್ನು ಬಂಡವಾಳ ಹೂಡಿಕೆಯಾಗಿ ಪರಿವರ್ತಿಸುವುದು, ವಿಮಾ ರಕ್ಷಣೆ ನೀಡುವುದು ಮತ್ತು ಸಂಪತ್ತು ನಿರ್ವಹಣೆ ಪರಿಹಾರಗಳನ್ನು ನೀಡುವುದು ಬ್ಯಾಂಕಿಂಗ್ ವ್ಯವಸ್ಥೆಯ ಗುರಿಯಾಗಬೇಕು.
ಹವಾಮಾನ ಬದಲಾವಣೆಯ ಮಾತುಕತೆಗಳಿಂದ ಕೆಲವು ರಾಷ್ಟ್ರಗಳು ಹಿಂದೆ ಸರಿಯುತ್ತಿರುವ ಬಗ್ಗೆ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.