ADVERTISEMENT

ಪತಿಗೆ ಕ್ರಿಮಿನಲ್ ಕ್ರಮದಿಂದ ವಿನಾಯಿತಿ ರದ್ದತಿ ಬೇಡ: ಕೇಂದ್ರದ ಪ್ರತಿಕ್ರಿಯೆ

ವೈವಾಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:28 IST
Last Updated 3 ಅಕ್ಟೋಬರ್ 2024, 16:28 IST
–
   

ನವದೆಹಲಿ: ‘ಒಬ್ಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ನಡೆಸುವ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳನ್ನು ದಂಡನಾರ್ಹ ‘ಅತ್ಯಾಚಾರ’ ಎಂಬುದಾಗಿ ಪರಿಗಣಿಸಿದಲ್ಲಿ, ಅದು ವೈವಾಹಿಕ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರಲಿದೆ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ವೈವಾಹಿಕ ಸಂಬಂಧದಲ್ಲಿ ಅತ್ಯಾಚಾರ ನಡೆದರೆ, ಕಾನೂನಿನ ತತ್ವಗಳ ಆಧಾರದಲ್ಲಿ, ಪತಿಗೆ ಕ್ರಿಮಿನಲ್ ಕ್ರಮದಿಂದ ವಿನಾಯಿತಿ ನೀಡಿರುವುದನ್ನು ತೆಗೆದುಹಾಕಿದಲ್ಲಿ ಅದು ವೈವಾಹಿಕ ಸಂಬಂಧದ ಮೇಲೆ ಅಗಾಧ ಪರಿಣಾಮ ಬೀರಲಿದೆ ಎಂದೂ ತಿಳಿಸಿದೆ.

‘ಸಾಮಾಜಿಕ ಮತ್ತು ಕೌಟುಂಬಿಕ ಸಂರಚನೆಯಲ್ಲಿ ವೇಗದ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ, ಈ ವಿಷಯಕ್ಕೆ ಸಂಬಂಧಿಸಿದ ಕಾನೂನಿನಲ್ಲಿನ ಅವಕಾಶಗಳಲ್ಲಿ ಮಾಡುವ ತಿದ್ದುಪಡಿಗಳ ದುರ್ಬಳಕೆಯಾಗುತ್ತದೆ ಎಂಬುದನ್ನು ಅಲ್ಲಗಳೆಯಲಾಗದು’ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ವೈವಾಹಿಕ ಸಂಬಂಧದಲ್ಲಿ ನಡೆಯುವ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಕೇಂದ್ರವು ಈ ಅಭಿಪ್ರಾಯ ತಿಳಿಸಿದೆ.

ಕೇಂದ್ರದ ಪ್ರಮಾಣಪತ್ರದಲ್ಲಿನ ಪ್ರಮುಖ ಅಂಶಗಳು
  • ವೈವಾಹಿಕ ಸಂಬಂಧದಲ್ಲಿ ಅತ್ಯಾಚಾರ ನಡೆದರೆ ಪತಿಗೆ ಕ್ರಿಮಿನಲ್ ಕ್ರಮದಿಂದ ವಿನಾಯಿತಿ ನೀಡಿರುವುದನ್ನು ಸಮರ್ಥನೀಯವಾಗಿದೆ. ಈ ವಿಷಯವನ್ನು ಕಟ್ಟುನಿಟ್ಟಿನಿಂದ ಕಾನೂನಾತ್ಮಕ ದೃಷ್ಟಿಯಿಂದ ನೋಡುವ ಬದಲು ಸಮಗ್ರವಾಗಿ ನೋಡಬೇಕು

  • ಪತ್ನಿಯ ಒಪ್ಪಿಗೆಯನ್ನು ಉಲ್ಲಂಘನೆ ಮಾಡುವ ಮೂಲಭೂತ ಹಕ್ಕನ್ನು ಪತಿ ಹೊಂದಿಲ್ಲ. ಆದರೆ ವೈವಾಹಿಕ ಸಂಬಂಧದಲ್ಲಿ ‘ಅತ್ಯಾಚಾರ’ ಸ್ವರೂಪದಲ್ಲಿ ಅಪರಾಧವಾಗಿ ಪರಿಗಣಿಸುವುದು ವಿಪರೀತ ಕಠಿಣವೆಂದೇ ಪರಿಗಣಿಸಬಹುದು. ಹೀಗಾಗಿ ಇದು ಅಳತೆಮೀರಿದ ಕ್ರಮವೆನಿಸಲಿದೆ

  • ಒಬ್ಬ ವಿವಾಹಿತ ಮಹಿಳೆ ಹಾಗೂ ಆಕೆಯ ಪತಿಗೆ ಸಂಬಂಧಿಸಿದ ಪ್ರಕರಣವನ್ನು ಇತರ ಪ್ರಕರಣಗಳಂತೆ ಪರಿಗಣಿಸಬಾರದು. ಮಹಿಳೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿ ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಬೇರೆ ಬೇರೆ ಅವಕಾಶಗಳಿವೆ

  • ವೈವಾಹಿಕ ಸಂಬಂಧದಲ್ಲಿ ಲೈಂಗಿಕ ಕ್ರಿಯೆಗೆ ಸಂಬಂಧಿಸಿ ಪರಸ್ಪರರಲ್ಲಿ ನಿರಂತರ ನಿರೀಕ್ಷೆಗಳು ಇರುತ್ತವೆ. ಇಂತಹ ನಿರೀಕ್ಷೆಯು ಲೈಂಗಿಕ ಕ್ರಿಯೆಗಾಗಿ ಪತ್ನಿಯನ್ನು ಬಲವಂತ ಮಾಡುವ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವ  ಹಕ್ಕನ್ನು ಪತಿಗೆ ನೀಡುವುದಿಲ್ಲ. ಆದರೆ ಇತರ ಅನ್ಯೋನ್ಯ ಸಂಬಂಧ ಅಥವಾ ಅಪರಿಚಿತನಿಂದ ಲೈಂಗಿಕ ಕ್ರಿಯೆಗೆ ಒತ್ತಾಯ ಕಂಡುಬಂದಲ್ಲಿ ಪ್ರಕರಣವೇ ಬೇರೆಯಾಗುತ್ತದೆ. ಆಗ ವೈವಾಹಿಕ ಸಂಬಂಧದಲ್ಲಿಯೇ ಒಪ್ಪಿತ ಲೈಂಗಿಕತೆ ಹಾಗೂ ವಿವಾಹೇತರ ಸಂಬಂಧದಲ್ಲಿ ಲೈಂಗಿಕತೆ ನಡುವಿನ ವ್ಯತ್ಯಾಸವನ್ನು ನಿರೂಪಿಸಲು ಕಾನೂನು ರಚನೆಗೆ ಆಧಾರವಾಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.