ನವದೆಹಲಿ: ಎದುರಾಗಿರುವ ಸಮಸ್ಯೆಯನ್ನು ಸರಿಯಾಗಿ ಗ್ರಹಿಸದೆದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಸಿಲುಕಿಸಿರುವುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
'ಸಮಸ್ಯೆಯ ಲಕ್ಷಣವನ್ನು ಸರಿಯಾಗಿ ಗ್ರಹಿಸುವುದರಲ್ಲಿ ಎಡವಿದರೆ ನೀಡುವ ಸಲಹೆ–ಸೂಚನೆಗಳು ನಿರುಪಯುಕ್ತವಾಗುತ್ತವೆ ಹಾಗೂ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಪ್ರಸಕ್ತ ಹಣಕಾಸು ವರ್ಷ ಪ್ರಾರಂಭವಾಗಿ 7 ತಿಂಗಳು ಕಳೆದಿದ್ದರೂ, ಆರ್ಥಿಕತೆಗೆ ಎದುರಾಗುತ್ತಿರುವ ಸಮಸ್ಯೆಗಳು ಆವರ್ತಕವಾದುದು ಎಂದೇ ಬಿಜೆಪಿ ಸರ್ಕಾರ ನಂಬಿದೆ. ಸರ್ಕಾರ ತಪ್ಪಾಗಿ ನಡೆದುಕೊಳ್ಳುತ್ತಿದೆ. ಆರ್ಥಿಕತೆಯ ಸುಳಿವೂ ಸರ್ಕಾರಕ್ಕೆ ಇಲ್ಲ' ಎಂದು ಚಿದಂಬರಂ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
ಹಣದ ಅಕ್ರಮ ವರ್ಗಾವಣೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿ, 106 ದಿನ ತಿಹಾರ್ ಜೈಲಿನಲ್ಲಿದ್ದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಬುಧವಾರ ರಾತ್ರಿ ಬಿಡುಗಡೆಯಾದ ಚಿದಂಬರಂ ಮೊದಲ ಮಾಧ್ಯಮ ಗೋಷ್ಠಿಯಲ್ಲೇ ಸರ್ಕಾರದ ಆಡಳಿತ ವೈಖರಿ ಮತ್ತು ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ.
'ಎದುರಾಗಿರುವ ಅನಿಶ್ಚಿತತೆ ಮತ್ತು ಭಯದ ಕಾರಣದಿಂದಾಗಿ ಜನರಲ್ಲಿಬೇಡಿಕೆ ಕುಸಿದಿದೆ ಹಾಗೂ ಅವರಲ್ಲಿ ಹಣದ ಹರಿಯುವಿಕೆಯೂ ಕಡಿಮೆಯಾಗಿದೆ. ಬೇಡಿಕೆ ಹೆಚ್ಚುವವರೆಗೂ ಉತ್ಪಾದನೆ ಏರಿಕೆಯಾಗುವುದಿಲ್ಲ ಅಥವಾ ಹೂಡಿಕೆಯಲ್ಲೂ ಹೆಚ್ಚಳವಾಗುವುದಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'8, 7, 6.6, 5.8, 5 ಮತ್ತು 4.5; ಇದಕ್ಕಿಂತಲೂ ಉತ್ತಮವಾಗಿ ಆರ್ಥಿಕತೆಯ ಸ್ಥಿತಿಯನ್ನ ಹೇಳಲು ಆಗದು. ಕಳೆದ ಆರು ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರವನ್ನು ಸಂಖ್ಯೆಗಳು ಸೂಚಿಸುತ್ತಿವೆ.ಆರ್ಥಿಕ ವೃದ್ಧಿ ದರವು ಶೇ 5 ತಲುಪುವುದರೊಂದಿಗೆ ವರ್ಷಾಂತ್ಯ ಕಂಡರೆ ನಾವೇ ಅದೃಷ್ಟವಂತರು. ಈ ಸರ್ಕಾರದ ಅವಧಿಯಲ್ಲಿ ವೃದ್ಧಿ ದರ ಶೇ 5ರ ಬಗ್ಗೆ ಡಾ.ಅರವಿಂದ್ ಸುಬ್ರಮಣಿಯನ್ ಅವರು ನೀಡಿದ್ದ ಎಚ್ಚರಿಕೆಯನ್ನು ನೆನಪಿಸಿಕೊಳ್ಳಬೇಕು. ಆರ್ಥಿಕತೆ ಕುರಿತು ಪ್ರಧಾನಿ ಮೌನ ವಹಿಸಿದ್ದಾರೆ. ಆರ್ಭಟ ಮತ್ತು ಸುಳ್ಳಾಡಲು ಅವರ ಸಚಿವರಿಗೆ ಆರ್ಥಿಕತೆ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಸರ್ಕಾರವು ಆರ್ಥಿಕತೆಯ ಬಗ್ಗೆ ಅಸಮರ್ಥ ನಿರ್ವಹಣೆ ತೋರಿರುವುದಾಗಿ ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ' ಎಂದಿದ್ದಾರೆ.
ಎರಡನೇ ತ್ರೈಮಾಸಿಕದ ಅಂಕಿ–ಅಂಶಗಳಲ್ಲಿ ಜಿಡಿಪಿ ಶೇ 4.5ಕ್ಕೆ ಕುಸಿದಿರುವುದು ದಾಖಲಾಗಿದೆ. ಗುರುವಾರ ಆರ್‌ಬಿಐ ಆರ್ಥಿಕ ವೃದ್ಧಿ ದರ ಅಂದಾಜು ಶೇ 5ಕ್ಕೆ ಇಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.