ADVERTISEMENT

ಕೋಲ್ಕತ್ತ: ಬಾಂಗ್ಲಾದಲ್ಲಿ ನಡೆದ ಹಿಂಸಾಚಾರ ಖಂಡಿಸಿ ವಿದ್ಯಾರ್ಥಿ ಸಂಘಟನೆ ಧರಣಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 16:04 IST
Last Updated 18 ಜುಲೈ 2024, 16:04 IST
   

ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಕೋಟಾ ಪದ್ಧತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ ಏಳು ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಘಟನೆಯನ್ನು ಖಂಡಿಸಿ ಅಖಿಲ ಭಾರತ ಡೆಮಾಕ್ರಟಿಕ್ ವಿದ್ಯಾರ್ಥಿ ಸಂಘಟನೆಯ(ಎಐಡಿಎಸ್‌ಒ) ನೂರಕ್ಕೂ ಅಧಿಕ ಕಾರ್ಯಕರ್ತರು ಕೋಲ್ಕತ್ತದ ಕೇಂದ್ರ ಭಾಗದಲ್ಲಿನ ಪಾರ್ಕ್ ಸರ್ಕಸ್ ಬಳಿ ಧರಣಿ ನಡೆಸಿದರು. ಇದೇ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ನೆರೆಯ ದೇಶದಲ್ಲಿ ಕೆಲದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಭದ್ರತಾ ಪಡೆಗಳು ನಡೆಸಿದ ದಾಳಿಯನ್ನು ವಿರೋಧಿಸಿ,  ಹೋರಾಟಗಾರರು ಬಿತ್ತಿ ಫಲಕ ಪ್ರದರ್ಶನ ಮಾಡಿದರು. ಇದೇ ವೇಳೆ ಅಲ್ಲಿನ ಹೋರಾಟಗಾರರಿಗೆ ಗಡಿಯಾಚೆಗಿನ ಬೆಂಬಲ ನೀಡುವ ಘೋಷಣೆಗಳನ್ನು ಕೂಗಿದರು. 

ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಲೇಡಿ ಬರ್ಬೋರೇನ್ ಕಾಲೇಜಿನಿಂದ ಬಾಂಗ್ಲಾದೇಶ ಉಪ ಹೈಕಮಿಷನ್ ಕಚೇರಿವರೆಗೆ ಪ್ರತಿಭಟನ ಮಾಡುವಾಗ, ಅವರನ್ನು ಪಾರ್ಕ್ ಸರ್ಕಸ್‌ ಬಳಿ ಪೋಲಿಸರು ತಡೆದರು.

ADVERTISEMENT

‘ಬಾಂಗ್ಲಾದೇಶದಲ್ಲಿ ಶಾಂತಿಯುತ ಪ್ರತಿಭಟನೆಗಳ ಮೇಲೆ ಯಾವುದೇ ದಾಳಿ ಮಾಡದಂತೆ ಹಾಗೂ ಕ್ಯಾಂಪಸ್‌ನೊಳಗೆ ಮೊದಲಿನ ವಾತಾವರಣ ನಿರ್ಮಾಣ ಮಾಡುವಂತೆ‘ ಕೋರಿ ಬಾಂಗ್ಲಾದೇಶದ ಉಪ ಹೈಕಮಿಷನ್‌ಗೆ ಮನವಿ ಸಲ್ಲಿಸಲು ನಾಲ್ವರಿಗೆ ಅವಕಾಶ ಮಾಡಿಕೊಡಲಾಗಿತ್ತು. 

ಬಾಂಗ್ಲಾದೇಶದ ಸರ್ಕಾರ ಹಾಗೂ ವಿದ್ಯಾರ್ಥಿಗಳ ನಡುವೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹಾಗೂ ಮುಂದೆ ಯಾವುದೇ ಜೀವ ಹಾನಿಯಾಗದಂತೆ ನೋಡಿಕೊಳ್ಳಲು ವಿದ್ಯಾರ್ಥಿ ಸಂಘಟನೆಯ ಮುಖಂಡರು ಮನವಿ ಮಾಡಿದರು. 

ಸಾವಿರಾರು ವಿದ್ಯಾರ್ಥಿಗಳು ಮಧ್ಯರಾತ್ರಿಯೇ ದೇಶಾದ್ಯಂತ ಬಂದ್‌ಗೆ ಕರೆಕೊಟ್ಟ ಕಾರಣ ಗುರುವಾರ ಬಾಂಗ್ಲಾದಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು.

ಹಲವು ದಿನಗಳ ಪ್ರತಿಭಟನೆಯ ಬಳಿಕ, ಹೋರಾಟಗಾರರು ರಾತ್ರೋರಾತ್ರಿ ‘ಸಂಪೂರ್ಣ ಬಂದ್‌’ಗೆ ಕರೆನೀಡಿದ್ದರು. ಇದರಿಂದ ಘರ್ಷಣೆ ಉಂಟಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಈಗಿರುವ ಕೋಟಾ ಪದ್ಧತಿಯು ಸರ್ಕಾರಿ ಕೆಲಸ ಪಡೆಯುವ ವೇಳೆ ಅರ್ಹತೆ ಉಳ್ಳವರಿಗೆ ದೊಡ್ಡ ಅಡೆತಡೆಯಾಗಿದೆ ಎಂದು ಪ್ರತಿಭಟಿಸುತ್ತಿದ್ದವರು ಹಾಗೂ ಆಡಳಿತದಲ್ಲಿರುವ ಅವಾಮಿ ಲೀಗ್‌ನ ವಿದ್ಯಾರ್ಥಿ ಸಂಘಟನೆಯ ನಡುವಿನ ಘರ್ಷಣೆಯಿಂದ ಹಿಂಸಾಚಾರ ಭುಗಿಲೆದ್ದಿತು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.