ಮುಂಬೈ: ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾವು ಪ್ರಕರಣದ ಸಮಗ್ರ ತನಿಖೆಗೆ ಐಐಟಿ ಬಾಂಬೆಯು ಸಮಿತಿಯೊಂದನ್ನು ರಚನೆ ಮಾಡಿದೆ.
‘ಪ್ರೊ.ನಂದ ಕಿಶೋರ್ ನೇತೃತ್ವದ ಸಮಿತಿಯಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ಘಟಕದ ಸದಸ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಐಐಟಿ ಬಾಂಬೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಇದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಸುಭಾಸಿಸ್ ಚೌದರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೂ ಹಂಚಿಕೊಳ್ಳಿ ಎಂದು ಇತರ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
‘ದರ್ಶನ್ ಸಾವಿಗೆ ಕಾರಣ ಏನು ಎಂಬ ಬಗ್ಗೆ ಐಐಟಿ ಬಾಂಬೆ ಮತ್ತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದರ್ಶನ್ ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಪಡೆದು ಪರೀಕ್ಷಿಸಲಾಗುತ್ತಿದೆ’ ಎಂದು ಚೌದರಿ ತಿಳಿಸಿದ್ದಾರೆ.
ದರ್ಶನ್ ಸೋಲಂಕಿ(18) ಫೆ.12ರಂದು ಹಾಸ್ಟೆಲ್‌ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಜಾತಿ ತಾರತಮ್ಯದಿಂದ ಬೇಸತ್ತು ಮೃತಪಟ್ಟಿರುವುದಾಗಿ ಕುಟುಂಬ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.