ಚೆನ್ನೈ: ಕಲ್ಲಕುರಿಚಿಯ ಚಿನ್ನಸೇಲಂನಲ್ಲಿರುವ ಖಾಸಗಿ ವಸತಿ ಶಾಲೆಯೊಂದರ ವಿದ್ಯಾರ್ಥಿನಿ ಜುಲೈ 13ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಭಾನುವಾರ ಹಿಂಸಾಚಾರಕ್ಕೆ ತಿರುಗಿದೆ.
ಪ್ರತಿಭಟನಕಾರರು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು. ಈ ವೇಳೆ 16 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರ ತಡೆಯಲು ಪೊಲೀಸರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು.
ಹಿಂಸಾಚಾರದ ಹಿನ್ನೆಲೆಯಲ್ಲಿ ಕಲ್ಲಕುರಿಚಿ ಜಿಲ್ಲೆಯ ವಿವಿಧೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
‘ಖಾಸಗಿ ಶಾಲೆಯ ಆವರಣಕ್ಕೆ ನುಗ್ಗಿ 13 ಶಾಲಾ ಬಸ್‌ಗಳಿಗೆ ಹಾಗೂ ಪೊಲೀಸ್ ವಾಹನಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.ಶಾಲೆಯ ನಾಮಫಲಕವನ್ನು ಧ್ವಂಸಗೊಳಿಸಿ, ಅಲ್ಲಿನ ಪೀಠೋಪಕರಣಗಳಿಗೆ ಹಾನಿ ಎಸಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿ ಕಾಪಾಡುವಂತೆ ಪ್ರತಿಭಟನಕಾರರಲ್ಲಿ ಮನವಿ ಮಾಡಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ‘ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕಲ್ಲಕುರುಚಿಗೆ ಧಾವಿಸಲುಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿ 35 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು ಸಿಬಿ–ಸಿಐಡಿ ತನಿಖೆ ನಡೆಯಬೇಕೆಂದು ಆಗ್ರಹಿಸಿ ವಿದ್ಯಾರ್ಥಿನಿಯ ಪೋಷಕರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಖಾಸಗಿ ಶಾಲೆಯ ಹಾಸ್ಟೆಲ್‌ನ ಮೂರನೇ ಮಹಡಿಯ ಕೊಠಡಿಯೊಂದರಲ್ಲಿ ವಾಸವಾಗಿದ್ದ ಬಾಲಕಿ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಬಾಲಕಿಯು ಸಾಯುವ ಮುನ್ನ ಆಕೆಯ ದೇಹದಲ್ಲಿ ಗಾಯಗಳಾಗಿದ್ದವು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಬಾಲಕಿಯ ಸಾವಿಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿ ಮೃತ ಬಾಲಕಿಯ ಪೋಷಕರು,ಸಂಬಂಧಿಕರು ಮತ್ತು ಗ್ರಾಮಸ್ಥರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ರಾಜಕೀಯ ಸಂಘಟನೆಗಳು ಹಾಗೂ ಎಡ ಪಕ್ಷದ ಯುವ ಘಟಕಗಳು ಬೆಂಬಲ ನೀಡಿವೆ. ಹಿಂಸಾಚಾರದಿಂದಾಗಿಚೆನ್ನೈ-ಸೇಲಂ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.