ನವದೆಹಲಿ: ‘ನೀಟ್– ಯುಜಿ’ ಮತ್ತು ಯುಜಿಸಿ– ನೆಟ್ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ದೆಹಲಿ, ಲಖನೌ ಸೇರಿದಂತೆ ದೇಶದ ವಿವಿಧೆಡೆ ಗುರುವಾರ ಪ್ರತಿಭಟನೆ ನಡೆಸಿದರು.
ಯುಜಿಸಿ–ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿದ ಕ್ರಮವನ್ನು ವಿರೋಧಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಮತ್ತು ಭಾರತೀಯ ಯುವ ಕಾಂಗ್ರೆಸ್ (ಐವೈಸಿ), ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದ ಬಳಿ ಪ್ರತಿಭಟಿಸಿದರು.
ಎನ್‌ಎಸ್‌ಯುಐನ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ ಅವರು, ಕಾರಿನ ಮೇಲೆ ನಿಂತು ನಕಲಿ ನಗದು ಹೊಂದಿದ್ದ ಚೀಲವನ್ನು ಗಾಳಿಯಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಶಿಕ್ಷಣ ಸಚಿವರು ಈ ಹಣವನ್ನು ತೆಗೆದುಕೊಂಡು, ವಿದ್ಯಾರ್ಥಿಗಳ ಭವಿಷ್ಯ ಪುನರ್ ರೂಪಿಸಲಿ ಎಂದು ವ್ಯಂಗ್ಯವಾಡಿದರು.
‘ಶಿಕ್ಷಣ ಸಚಿವರು ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನೀಟ್ ಮತ್ತು ನೆಟ್‌ನಲ್ಲಿ ದೊಡ್ಡ ಹಗರಣ ನಡೆದಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದರು.
ಯುವ ಕಾಂಗ್ರೆಸ್ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದ ಬಳಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರೂ ಪ್ರತಿಭಟನೆ ನಡೆಸಿ, ನೀಟ್ ಮತ್ತು ನೆಟ್ ಅಕ್ರಮವನ್ನು ಖಂಡಿಸಿದರು.
ಈ ಎರಡೂ ಪರೀಕ್ಷೆಗಳ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ತಳ್ಳಿದಂತಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅನ್ನು ವಜಾಗೊಳಿಸಿಬೇಕು ಮತ್ತು ನೀಟ್–ಯುಜಿ ಮತ್ತು ಯುಜಿಸಿ–ನೆಟ್ ಪರೀಕ್ಷಾರ್ಥಿಗಳಿಗೆ ಆದಷ್ಟು ಬೇಗ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಐವೈಸಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡಿ, ‘ಪರೀಕ್ಷಾ ವಂಚನೆಯಿಂದ ವಿದ್ಯಾರ್ಥಿಗಳಿಗೆ ಭಾರಿ ಮೋಸ ಆಗಿದೆ. ಜತೆಗೆ ದೇಶದ ಭವಿಷ್ಯಕ್ಕೆ ದ್ರೋಹ ಎಸಗಿದಂತಾಗಿದೆ’ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವರು ಐವೈಸಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ನವದೆಹಲಿ: ಯುಜಿಸಿ–ನೆಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಪ್ರಕರಣ ದಾಖಲಿಸಿರುವುದಾಗಿ ಎಫ್‌ಐಆರ್ ಹೇಳಿದೆ..
ಯುಜಿಸಿ– ನೆಟ್ ರದ್ದುಗೊಳಿಸಿದ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಲಖನೌನಲ್ಲಿ ತೀವ್ರ ಪ‍್ರತಿಭಟನೆ ನಡೆಸಿದರು.
ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ ನೀಟ್–ಯುಜಿ 2024 ಪರೀಕ್ಷೆ ಯನ್ನು ರದ್ದುಪಡಿಸಬೇಕು ಹಾಗೂ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂಬ ಕೋರಿಕೆ ಇರುವ ಅರ್ಜಿಗಳು ಸೇರಿದಂತೆ ಹಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ (ಎನ್‌ಟಿಎ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ಇದರ ಜೊತೆಯಲ್ಲೇ, ನೀಟ್–ಯುಜಿ 2024 ಪರೀಕ್ಷೆಗೆ ಸಂಬಂಧಿಸಿದಂತೆ ಬೇರೆ ಬೇರೆ ಹೈಕೋರ್ಟ್‌ಗಳಲ್ಲಿ ನಡೆಯುತ್ತಿರುವ ವಿಚಾರಣೆಗಳಿಗೆ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇದ್ದ ವಿಭಾಗೀಯ ಪೀಠವು ಗುರುವಾರ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಜುಲೈ 8ರಂದು ನಡೆಸಲಾಗುತ್ತದೆ ಎಂದು ಪೀಠ ಹೇಳಿದೆ. ಆ ದಿನಕ್ಕೆ ಮೊದಲು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ಪ್ರತಿಕ್ರಿಯೆ ಸಲ್ಲಿಸಬೇಕಿದೆ.ಆದರೆ, ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ಇಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯು ಜುಲೈ 6ರಂದು ಶುರುವಾಗಲಿದೆ. ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ವಕೀಲರೊಬ್ಬರು ಪೀಠಕ್ಕೆ ಮಾಹಿತಿ ನೀಡಿದರು.
ಅಕ್ರಮಗಳ ಆರೋಪ ಕುರಿತು ಬಿಹಾರ ಹಾಗೂ ಗುಜರಾತ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ವಸ್ತುಸ್ಥಿತಿ ಏನಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ವಕೀಲರೊಬ್ಬರು ಮನವಿ ಮಾಡಿದರು.
ನೀಟ್–ಯುಜಿ 2024 ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಿದವರ ವಾದಗಳಲ್ಲಿ ಸಾಮ್ಯ ಇದೆ ಎಂದು ಪೀಠವು ಹೇಳಿತು. ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ, ಪರೀಕ್ಷೆಯಲ್ಲಿ ಇತರ ಕೆಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಇವೆ.
ಲಖನೌ: ‘ಯುಜಿಸಿ–ನೆಟ್’ ಪರೀಕ್ಷೆ ರದ್ದುಗೊಳಿಸಿದ ಕ್ರಮವನ್ನು ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಲಖನೌ ವಿಶ್ವವಿದ್ಯಾಲಯದ ಹೊರಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಸಮಾಜವಾದಿ ಛಾತ್ರ ಸಂಘ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಸಂಘಟನೆಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರವೇಶ ದ್ವಾರದ ಬಳಿ ಜಮಾಯಿಸಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಕಾರರು ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದರು.
‘ನೆಟ್ ಪರೀಕ್ಷೆಗಾಗಿ ವರ್ಷಕ್ಕೂ ಹೆಚ್ಚು ಕಾಲ ಶ್ರಮಿಸಿದ್ದೇವೆ. ಪರೀಕ್ಷೆ ಬರೆದ ನಂತರ ಅದನ್ನು ರದ್ದುಪಡಿಸಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ನವದೆಹಲಿ: ‘ಯುಜಿಸಿ–ನೆಟ್ ಪರೀಕ್ಷೆ ಬಗ್ಗೆ ಯಾವುದೇ ದೂರುಗಳು ಬಂದಿರಲಿಲ್ಲ. ಆದರೆ ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ಈ ಪರೀಕ್ಷೆಯನ್ನು ರದ್ದುಪಡಿಸಲಾಯಿತು’ ಎಂದು ಶಿಕ್ಷಣ ಸಚಿವಾಲಯ ಗುರುವಾರ ತಿಳಿಸಿದೆ.
‘ನಮ್ಮ ಬಳಿ ಲಭ್ಯವಿದ್ದ ಆಧಾರಗಳ ಮೇರೆಗೆ ಸ್ವಯಂ ಪ್ರೇರಿತವಾಗಿ ಪರೀಕ್ಷೆ ರದ್ದುಪಡಿಸುವ ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲದೆ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಸುದ್ದಿಗಾರರಿಗೆ ಹೇಳಿದರು.
‘ನಮ್ಮ ಏಜೆನ್ಸಿಗಳಿಂದ ಸ್ವೀಕರಿಸಿದ ಮಾಹಿತಿಯಿಂದ ಪರೀಕ್ಷಾ ಸಮಗ್ರತೆಗೆ ಧಕ್ಕೆಯಾಗಿದೆ ಎಂಬುದು ತಿಳಿಯಿತು. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಪರೀಕ್ಷೆಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು. ಪರೀಕ್ಷೆಗೆ ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಯುಜಿಸಿ–ನೆಟ್ ಪರೀಕ್ಷೆಯಲ್ಲಿ ಕೇಳಿದ ಕೆಲ ಪ್ರಶ್ನೆಗಳು ಶಿಕ್ಷಣ ಕೇಸರೀಕರಣ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಕಳವಳ ವ್ಯಕ್ತಪಡಿಸಿದ್ದಾರೆ. ನೆಟ್ ಪರೀಕ್ಷೆ ಬರೆದ ರಂಗಭೂಮಿ ವಿದ್ಯಾರ್ಥಿಗಳಿಗೆ ಅಯೋಧ್ಯೆ ಪ್ರಾಣಪ್ರತಿಷ್ಠಾಪನೆಯ ದಿನಾಂಕ ಹನುಮಂತನನ್ನು ಹೇಗೆ ವಿವರಿಸಲಾಗಿದೆ ರಾಮಾಯಣದಲ್ಲಿನ ಶ್ಲೋಕ... ಹೀಗೆ ಕೇಳಲಾಗಿದೆ. ರಾಮಾಯಣ ಮಹಾಭಾರತ ಮತ್ತು ಇತರ ಧಾರ್ಮಿಕ ಪಠ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿದೆ. ನಮ್ಮ ಮುಂದಿನ ಪೀಳಿಗೆಯನ್ನು ನಾವು ಹೇಗೆ ರೂಪಿಸಲು ಉದ್ದೇಶಿಸಿದ್ದೇವೆ ಎಂದು ಅವರು ಪ್ರಶ್ನಿಸಿದ್ದಾರೆ.
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಆರಂಭದಲ್ಲಿ ಎದುರಾಗಿರುವ ಪರೀಕ್ಷಾ ವೈಫಲ್ಯಗಳು (ನೀಟ್ ನೆಟ್) ಸೇರಿದಂತೆ ಕೆಲ ಪ್ರಮುಖ ವಿಚಾರಗಳು ಸರ್ಕಾರವನ್ನು ವಿರೋಧಿಸಲು ಪ್ರತಿಪಕ್ಷಗಳಿಗೆ ಪ್ರಬಲವಾದ ಅಸ್ತ್ರಗಳು ಸಿಕ್ಕಂತಾಗಿವೆ.
ಮಣಿಪುರದ ಹಿಂಸಾಚಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಫಘಾತ ಸೇರಿದಂತೆ ಕೆಲ ಪ್ರಮುಖ ವಿಷಯಗಳ ಮೂಲಕ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.
‘ಯುಜಿ–ನೀಟ್’ ಮತ್ತು ಯುಜಿಸಿ–ನೆಟ್ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳು ಈಗಾಗಲೇ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಎರಡೂ ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗಿದೆ ಎಂದು ಅವು ಆರೋಪಿಸಿವೆ. ಈ ಪರೀಕ್ಷಾ ವೈಫಲ್ಯಗಳು ಮತ್ತು ಅಕ್ರಮಗಳ ಕುರಿತು ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಕರೆ ನೀಡಿರುವ ಕಾಂಗ್ರೆಸ್ ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಕುರಿತು ಗಟ್ಟಿಯಾಗಿ ಧ್ವನಿಯೆತ್ತುವುದಾಗಿ ಘೋಷಿಸಿದೆ. ಇದಕ್ಕೆ ‘ಇಂಡಿಯಾ’ ಮೈತ್ರಿಯ ಪಕ್ಷಗಳೂ ಬೆಂಬಲ ಸೂಚಿಸಿವೆ.
ಎನ್‌ಡಿಎ ಪಾಲುದಾರರಾದ ಟಿಡಿಪಿ ಮತ್ತು ಜೆಡಿಯು ಪಕ್ಷಗಳು ಈ ವಿಷಯದಲ್ಲಿ ಸರ್ಕಾರದ ರಕ್ಷಣೆಗೆ ಬರುವುದಿಲ್ಲ ಎಂಬ ವಿಶ್ವಾಸವನ್ನು ವಿರೋಧ ಪಕ್ಷಗಳು ಹೊಂದಿವೆ. ಈ ವಿಷಯಗಳನ್ನು ಆಧರಿಸಿ ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ತಂತ್ರಗಾರಿಕೆಯಲ್ಲಿ ತೊಡಗಿವೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವರ್ಷಕ್ಕೆ ಎರಡು ಬಾರಿ ಅಂದರೆ ಜೂನ್ ಮತ್ತು ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ದೇಶದಾದ್ಯಂತ ವಿಶ್ವವಿದ್ಯಾಲಯಗಳು ಪದವಿ ಕಾಲೇಜುಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳಲು ಅರ್ಹತೆ ಪಡೆಯುತ್ತಾರೆ. ಅಲ್ಲದೆ ಪಿಎಚ್.ಡಿ ಪ್ರವೇಶಕ್ಕೆ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೂ (ಜೆಆರ್‌ಎಫ್) ಅರ್ಹರಾಗುತ್ತಾರೆ. ಜೆಆರ್‌ಎಫ್‌ಗೆ ಅರ್ಹರಾಗುವವರಿಗೆ ಸಂಶೋಧನಾ ಚಟುವಟಿಕೆ ಕೈಗೊಳ್ಳಲು ಎರಡು ವರ್ಷಗಳವರೆಗೆ ಮಾಸಿಕ ₹ 37000 ಸ್ಟೈಪೆಂಡ್ ದೊರೆಯುತ್ತದೆ. ಯುಜಿಸಿ–ನೆಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುತ್ತದೆ. 2018ರ ಡಿಸೆಂಬರ್‌ನಿಂದ ಕಂಪ್ಯೂಟರ್ ಆಧರಿತ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಅದನ್ನು ಬದಲಿಸಿ ಪೆನ್ ಮತ್ತು ಪೇಪರ್ ಬಳಕೆಯ ಒಎಂಆರ್ ವಿಧಾನವನ್ನು ಪರಿಚಯಿಸಿದೆ.
‘ಉಕ್ರೇನ್–ರಷ್ಯಾ ಯುದ್ಧವನ್ನು ನರೇಂದ್ರ ಮೋದಿ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪರೀಕ್ಷೆ ಪ್ರಶ್ನೆಪತ್ರಿಕೆಯ ಸೋರಿಕೆ ತಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಕಾಳಜಿ ತಮ್ಮ ಸರ್ಕಾರದ ಉಳಿವಿಗಾಗಿಯೇ ಹೊರತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲಲ್ಲ.-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ನಮ್ಮ ವಿದ್ಯಾರ್ಥಿಗಳ ಜೀವನ ಮತ್ತು ಭವಿಷ್ಯ ನಿತ್ಯ ನಾಶವಾಗುತ್ತಿದೆ. ಲೋಕಸಭಾ ಚುನಾವಣೆಯಿಂದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪಾಠ ಕಲಿತಿಲ್ಲ. ಆದಷ್ಟು ಬೇಗ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು-ಸಾಕೇತ್ ಗೋಖಲೆ, ಸಂಸದ, ಟಿಎಂಸಿ
ಮೊದಲಿಗೆ ಸಿಯುಇಟಿಯಲ್ಲಿ ವ್ಯತ್ಯಾಸಗಳಾದವು. ಬಳಿಕ ನೀಟ್ ಹಗರಣ ಈಗ ಯುಜಿಸಿ–ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ! ಬಿಜೆಪಿ ಸರ್ಕಾರವು ಶಿಕ್ಷಣ ವ್ಯವಸ್ಥೆಯನ್ನು ಪೂರ್ಣವಾಗಿ ಅಪಹಾಸ್ಯ ಮಾಡಿದೆ-ಸಿಪಿಐ (ಎಂ)
ನೆಟ್ ಅನ್ನು ರದ್ದುಗೊಳಿಸಿದಂತೆಯೇ ನೀಟ್ ಅನ್ನೂ ರದ್ದುಗೊಳಿಸಿ. ಏಕೆಂದರೆ ಈ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಲ್ಲಿಯೂ ಪರೀಕ್ಷಾ ಸಮಗ್ರತೆಗೆ ಧಕ್ಕೆಯಾಗಿದೆ-ಮನೋಜ್ ಝಾ, ಸಂಸದ ಆರ್‌ಜೆಡಿ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಯು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಈ ಬಗ್ಗೆಯೂ ತನಿಖೆ ಆಗಬೇಕಿದೆ-ವಿಜಯ್ ಕುಮಾರ್ ಸಿನ್ಹಾ, ಉಪ ಮುಖ್ಯಮಂತ್ರಿ ಬಿಹಾರ
ನೀಟ್ ಮತ್ತು ನೆಟ್ ಪರೀಕ್ಷೆಗಳನ್ನು ನಡೆಸುವಲ್ಲಿ ಎನ್‌ಟಿಎ ಲೋಪವನ್ನು ಸಹಿಸಲು ಆಗುವುದಿಲ್ಲ. ಎನ್‌ಟಿಎಯಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು-ಪಿಣರಾಯಿ ವಿಜಯನ್, ಮುಖ್ಯಮಂತ್ರಿ ಕೇರಳ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒಂದು ಪರೀಕ್ಷೆಯನ್ನೂ ಸರಿಯಾಗಿ ನಡೆಸಲು ಆಗುತ್ತಿಲ್ಲ. ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಅದು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ-ಅಸಾದುದ್ದೀನ್ ಓವೈಸಿ, ಮುಖ್ಯಸ್ಥ ಎಐಎಂಐಎಂ
ಈ ಬಾರಿಯ ಯುಜಿಸಿ– ನೆಟ್‌ನ ಅಂಕಿ ಅಂಶಗಳು
11.21 ಲಕ್ಷ: ಪರೀಕ್ಷೆಗೆ ಹೆಸರು ನೋಂದಾಯಿಸಿದ್ದವರು
9 ಲಕ್ಷ: ಹಾಜರಾದ ಅಭ್ಯರ್ಥಿಗಳು
317: ನಗರಗಳಲ್ಲಿ ಪರೀಕ್ಷೆ ನಡೆದಿತ್ತು
1,205: ಪರೀಕ್ಷೆ ನಡೆದಿದ್ದ ಕೇಂದ್ರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.