ADVERTISEMENT

ಗಡಿ ಸಂಘರ್ಷ | ಲಡಾಖ್‌ನಲ್ಲಿ ಯುದ್ಧವಾದರೆ ಚೀನಾ ಸೋಲಬಹುದು ಎನ್ನುತ್ತವೆ ಅಧ್ಯಯನಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2020, 2:00 IST
Last Updated 24 ಜೂನ್ 2020, 2:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ-ಚೀನಾ ಸೇನಾಪಡೆಗಳು 1962ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಹಿಮಾಲಯ ಪ್ರದೇಶದಲ್ಲಿ ಮತ್ತೆ ಕಾದಾಡಿಕೊಂಡಿವೆ. 58 ವರ್ಷಗಳ ಬಳಿಕ ಎರಡೂ ಕಡೆಗಳಲ್ಲಿ ಸಾವು-ನೋವಿಗೆ ಕಾರಣವಾಗಿರುವ ಸಂಘರ್ಷ ಇದಾಗಿದೆ.

ಈ ಹಿಂದೆ ಉಭಯ ದೇಶಗಳ ಸೇನಾಪಡೆಗಳು ಮುಖಾಮುಖಿಯಾಗಿದ್ದರೂ ಜೂನ್ 15 ಸಂಘರ್ಷದಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಸುಮಾರು 76 ಮಂದಿ ಗಾಯಗೊಂಡಿದ್ದಾರೆ. ಅದೇ ರೀತಿ ಚೀನಾ ಕಡೆಯಲ್ಲೂ 45 ಸಾವು–ನೋವು ಸಂಭವಿಸಿದೆ ಎನ್ನಲಾಗುತ್ತಿದೆ.

ಗಾಲ್ವನ್ ನದಿ ಬಳಿ ನಡೆದ ಈ ಸಂಘರ್ಷ ಚೀನಾ ಪಡೆಗಳ ಜೊತೆಗಿನ ಹಿಂದಿನ ಮುಖಾಮುಖಿಗಳಿಗಿಂತ ಭಿನ್ನವಾಗಿದೆ. ಚೀನಾ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು. ಈಗ ವಾಸ್ತವ ಗಡಿರೇಖೆ (ಎಲ್‌ಎಸಿ) ಬಳಿ ಅವರು ಕಂದಕವನ್ನು ತೋಡಿದ್ದಾರೆ ಎಂಬುದು ಉಪಗ್ರಹ ಆಧರಿತ ಚಿತ್ರಗಳಿಂದತಿಳಿದುಬಂದಿದೆ.

ADVERTISEMENT

1962ರ ಯುದ್ಧದಲ್ಲಿ ಅಕ್ಷಯ್ ಚಿನ್ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಚೀನಾವು ಕದನ ವಿರಾಮ ಘೋಷಿಸಿತ್ತು. ಅಂದಿನ ಯುದ್ಧದಲ್ಲಿ 1,383 ಭಾರತೀಯ ಯೋಧರು ಹುತಾತ್ಮರಾಗಿದ್ದರೆ, ಚೀನಾದ 722 ಯೋಧರು ಮೃತಪಟ್ಟಿದ್ದರು.

ಆ ಯುದ್ಧದಲ್ಲಿನ ಸೋಲಿನೊಂದಿಗೆ ಭಾರತದ ಸೇನಾ ಸಾಮರ್ಥ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೂ ಉದ್ಭವಿಸಿದ್ದವು.ಈಗ ಅಂತಹದ್ದೇ ಘಟನೆ ಒಂದುವೇಳೆ ನಡೆದರೆ ಭಾರತವೇ ಮೇಲುಗೈ ಸಾಧಿಸಬಹುದು ಎಂದು ಎರಡು ಅಧ್ಯಯನಗಳು ತಿಳಿಸಿವೆ.

ಚೀನಾವು ಒಂದುವೇಳೆ ಹಿಂದಿನಂತೆ ಸೇನಾ ದುಃಸ್ಸಾಹಸಕ್ಕೆ ಕೈ ಹಾಕಿದರೆ ಅದಕ್ಕೆ ಹಿನ್ನಡೆಯಾಗಬಹುದು. ಭಾರತ ಮೇಲುಗೈ ಸಾಧಿಸಬಹುದು ಎಂದು ಬಾಸ್ಟನ್‌ನ ಹಾರ್ವರ್ಡ್ ಕೆನಡಿ ಸ್ಕೂಲ್ ಆಫ್ ಗವರ್ಮೆಂಟ್‌ನ ಬೆಲ್ಫರ್ ಸೆಂಟರ್ ಮತ್ತು ವಾಷಿಂಗ್ಟನ್‌ನ ‘ಸೆಂಟರ್ ಫರ್ ಎ ನ್ಯೂ ಅಮೆರಿಕನ್ ಸೆಕ್ಯೂರಿಟಿ’ಯ ಅಧ್ಯಯನ ವರದಿಗಳು ಹೇಳಿವೆ.

ಪಾಕಿಸ್ತಾನದ ಜೊತೆಗೆ ಗಡಿಯಲ್ಲಿ ಆಗಾಗ ಸಂಭವಿಸುವ ಸಣ್ಣಪುಟ್ಟ ಘರ್ಷಣೆಗಳು ಭಾರತೀಯ ಸೇನೆಗೆ ಯುದ್ಧ ಸಾಮರ್ಥ್ಯ ಕಾಪಾಡಿಕೊಳ್ಳಲು ನೆರವಾಗಿದ್ದರೆ, ಚೀನಾದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಗೆ ಇಂತಹ ಸಂಘರ್ಷದ ಅನುಭವಗಳಿಲ್ಲ ಎಂದು ಸೆಂಟರ್ ಫರ್ ನ್ಯೂ ಅಮೆರಿಕನ್ ಸೆಕ್ಯೂರಿಟಿ 2019ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಮತ್ತೊಂದೆಡೆ 1979ರ ವಿಯೆಟ್ನಾಂ ಯುದ್ಧದ ಬಳಿಕ ಚೀನಾ ಸೇನೆಗೆ ಯಾವುದೇ ಯುದ್ಧ ಅನುಭವವಿಲ್ಲ ಎಂದೂ ಹೇಳಿದೆ.

ಅಕ್ಷಯ್ ಚಿನ್ ಪ್ರದೇಶಕ್ಕೆ 70 ಸಾವಿರ ಯೋಧರನ್ನು ಕರೆಸಿಕೊಳ್ಳುವ ಸಾಮರ್ಥ್ಯ ಚೀನಾಕ್ಕಿದೆ. ಭಾರತ ಸುಮಾರು 34 ಸಾವಿರ ಯೋಧರನ್ನು ಕರೆಸಿಕೊಳ್ಳಬಹುದಾಗಿದೆ ಎಂದು ಬೆಲ್ಫರ್‌ ಸೆಂಟರ್‌ನ 2020ರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ ಸಾಮಾನ್ಯ ಇಷ್ಟೇ ಸಂಖ್ಯೆಯ ಭಾರತೀಯ ಯೋಧರು ಈಗಾಗಲೇ ಆ ಪ್ರದೇಶದಲ್ಲಿ ಇರುವುದು ಭಾರತದ ಸಕಾರಾತ್ಮಕ ಅಂಶ ಎಂದು ಸೆಂಟರ್ ಫರ್ ನ್ಯೂ ಅಮೆರಿಕನ್ ಸೆಕ್ಯೂರಿಟಿ ವರದಿ ಹೇಳಿದೆ. ಆದರೂ ಪರ್ವತ ಶ್ರೇಣಿಗಳಿಂದ ಕೂಡಿರುವ ಪ್ರದೇಶದಲ್ಲಿ ಮುನ್ನುಗ್ಗುವುದು ಭಾರತೀಯ ಸವಾಲಿನ ಅಂಶವಾಗಿದೆ ಎಂದು ವರದಿ ಹೇಳಿದೆ.

ಟಿಬೆಟ್ ಮತ್ತು ಕ್ಸಿನ್‌ಜಿಯಾಂಗ್‌ ಪ್ರದೇಶಗಳಲ್ಲಿ ಚೀನಾ ಆಗಾಗ ದಂಗೆ ಎದುರಿಸುತ್ತಿದೆ. ಜೊತೆಗೆ ರಷ್ಯಾದ ಗಡಿಯುದ್ದಕ್ಕೂ ಭದ್ರತೆ ಕಾಪಾಡಿಕೊಳ್ಳುವ ಅಗತ್ಯವಿದೆ. ಅಕ್ಷಯ್ ಚಿನ್ತಲುಪಲುಅದೇ ಪ್ರದೇಶದಲ್ಲಿ ಹಾದು ಬರುವನೂರಾರು ಕಿಲೋಮೀಟರ್ ಅಂತರದರೈಲು ಮತ್ತು ರಸ್ತೆ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ. ಈ ವೇಳೆ ಭಾರತೀಯ ವಾಯುಪಡೆಯಿಂದ ದಾಳಿ ಭೀತಿ ಸದಾ ಇದ್ದೇ ಇದೆ ಎಂದು ವರದಿ ಉಲ್ಲೇಖಿಸಿದೆ.

ಬೆಲ್ಫರ್ ವರದಿಯ ಪ್ರಕಾರ, ಪಾಕಿಸ್ತಾನದ ಜತೆಗಿನ ಸಂಘರ್ಷಗಳ ಹೊರತಾಗಿಯೂ ದುರ್ಬಲಗೊಳ್ಳದೆ ಎದುರಾಳಿಯ ವಿರುದ್ಧ ಸಮರ್ಥವಾಗಿ ದಾಳಿ ನಡೆಸಬಲ್ಲ 270 ಯುದ್ಧವಿಮಾನಗಳು, ನೆಲದಿಂದ ದಾಳಿ ನಡೆಸಬಲ್ಲ 68 ಪರಮಾಣು ಅಸ್ತ್ರಗಳು ಭಾರತದ ಬಳಿ ಇವೆ. ಅತ್ಯಾಧುನಿಕ ಲ್ಯಾಂಡಿಂಗ್ ಗ್ರೌಂಡ್‌ಗಳು (ವಿಮಾನಗಳು ಇಳಿಯಲು-ಹಾರಲು ಸಾಧ್ಯವಾಗುವ ಸಮತಟ್ಟಾದ ಭೂ ಪ್ರದೇಶ)ಸಮವೈಮಾನಿಕ ದಾಳಿಗೆ ನೆರವಾಗಲಿವೆ.

ಚೀನಾ ಬಳಿ 157 ಯುದ್ಧವಿಮಾನಗಳಿದ್ದರೆ, 44 ಗ್ರೌಂಡ್ ಅಟ್ಯಾಕ್ಡ್ರೋನ್‌ಗಳಿವೆ.ಇವು ಅಕ್ಷಾಯ್ಚಿನ್ ಪ್ರದೇಶದಿಂದ 700 ಕಿಲೋ ಮೀಟರ್‌ ದೂರದವರೆಗೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿವೆ. ಚೀನಾ ವಾಯುಪಡೆಯು ಈ ಪ್ರದೇಶದಲ್ಲಿ 8 ವಾಯುನೆಲೆಗಳನ್ನು ಹೊಂದಿದೆ. ಆದರೆ, ಇವುಗಳೆಲ್ಲ ನಾಗರಿಕ ವಾಯುನೆಲೆಗಳು. ಅತ್ಯಾಧುನಿಕ ಲ್ಯಾಂಡಿಂಗ್ ಸೌಕರ್ಯಗಳಿಲ್ಲ ಎನ್ನಲಾಗಿದೆ.

‘ಟಿಬೆಟ್ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿ ಚೀನಾ ವಾಯುನೆಲೆಗಳು ಹೆಚ್ಚು ಎತ್ತರ ಪ್ರದೇಶಗಳಲ್ಲಿವೆ. ಈ ಪ್ರದೇಶದ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳು ಚೀನಾ ಸೇನೆಗೆ ಸವಾಲಾಗಿ ಪರಿಣಮಿಸಲಿದೆ. ಅಂದರೆ, ಚೀನಾ ಯೋಧರು ತಮ್ಮ ಸಾಮರ್ಥ್ಯದ ಅರ್ಧದಷ್ಟು ಪೇಲೋಡ್ ಮತ್ತು ಇಂಧನವನ್ನು ಸಾಗಿಸಲಷ್ಟೇ ಸಾಧ್ಯ’ ಎಂದು ಬೆಲ್ಫರ್ ಅಧ್ಯಯನ ವರದಿ ಹೇಳಿದೆ.

ಆದರೆ, ಎಲ್ಲ ರೀತಿಯ ಹವಾಮಾನಗಳಲ್ಲಿಯೂ ಸಮರ್ಥವಾಗಿ ಕಾರ್ಯಾಚರಣೆ ನಡೆಸಬಲ್ಲ ‘ಮಿರಾಜ್ 2000’, ‘ಸುಖೋಯ್ ಎಸ್‌ಯು–30’ ಭಾರತಕ್ಕಿರುವ ದೊಡ್ಡ ಶಕ್ತಿ. ಚೀನಾ ಬಳಿ ‘ಜೆ–10’, ‘ಜೆ–11’ ಮತ್ತು ’ಎಸ್‌ಯು–27’ ಯುದ್ಧವಿಮಾನಗಳಿದ್ದು, ಈ ಪೈಕಿ ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ‘ಜೆ–10’ ಯುದ್ಧವಿಮಾನಗಳಿಗೆ ಮಾತ್ರ ಇದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.