ADVERTISEMENT

ರಾಜಕಾರಣಿಗಳ ಐಫೋನ್ ಹ್ಯಾಕ್: ಫೋನ್‌ ನೀಡಿ; ತನಿಖೆಗೆ ಸಹಕರಿಸಿ– ಸಚಿವ ವೈಷ್ಣವ್

ಪಿಟಿಐ
Published 9 ಫೆಬ್ರುವರಿ 2024, 11:24 IST
Last Updated 9 ಫೆಬ್ರುವರಿ 2024, 11:24 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ವಿರೋಧಪಕ್ಷಗಳ ಕೆಲವು ನಾಯಕರ ಐಫೋನ್‌ಗಳಿಗೆ ಬಂದ ಹ್ಯಾಕ್ ಎಚ್ಚರಿಕೆಗೆ ಸಂಬಂಧಿಸಿದಂತೆ ತಮ್ಮ ಫೋನ್‌ಗಳನ್ನು ವಶಕ್ಕೆ ನೀಡುವಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಿರೋಧ ಪಕ್ಷಗಳ ಕೆಲವು ನಾಯಕರ ಐಫೋನ್‌ಗಳಿಗೆ ಅಕ್ಟೋಬರ್‌ನಲ್ಲಿ ಹ್ಯಾಕ್‌ ಎಚ್ಚರಿಕೆ ಸಂದೇಶ ಬಂದಿದ್ದವು. ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ತಮ್ಮ ಮೊಬೈಲ್‌ಗಳನ್ನು ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದರು. ಈ ವಿಷಯವನ್ನೇ ಶಿವಸೇನಾದ ಯುಬಿಟಿ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದರು.

‘ಈ ಕುರಿತು ಸಚಿವರ ಗಮನಕ್ಕೆ ತಂದು ನಾಲ್ಕು ತಿಂಗಳು ಕಳೆದರೂ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ’ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಶುಕ್ರವಾರ ಉತ್ತರಿಸಿದ ಸಚಿವ ವೈಷ್ಣವ್, ‘ಕೇವಲ ಆರೋಪ ಮಾಡುವುದರಿಂದ ಕೆಲಸ ಆಗದು. ಬದಲಿಗೆ ಕಾನೂನು ಪಾಲನಾ ಸಂಸ್ಥೆಗಳೊಂದಿಗೆ ಅಗತ್ಯ ಸಹಕಾರ ನೀಡುವತ್ತಲೂ ನಾಯಕರು ತಮ್ಮ ಜವಾಬ್ದಾರಿ ಮೆರೆಯಬೇಕು. ಯಾರಿಗಾದರೂ ತಮ್ಮ ಫೋನ್‌ನಲ್ಲಿ ಸಮಸ್ಯೆ ಇದೆ ಎಂದೆನಿಸಿದರೆ, ಭಾರತದಲ್ಲಿ ಸಿಇಆರ್‌ಟಿ–ಇನ್ ಎಂಬ ಅತ್ಯಾಧುನಿಕ, ಶಕ್ತಿಶಾಲಿ ತಂತ್ರಜ್ಞಾನ ಸಂಸ್ಥೆಯಿದ್ದು, ಅದು ತಾಂತ್ರಿಕ ಪರಿಶೀಲನೆ ನಡೆಸಲಿದೆ ’ ಎಂದಿದ್ದಾರೆ.

‘ಭಾರತದ ಯಾವುದೇ ಮುಖಂಡರು ಅಥವಾ ನಾಗರಿಕರ ಫೋನ್‌ಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಅನುಮಾನವಿದ್ದಲ್ಲಿ, ಅವರ ಫೋನ್‌ಗಳನ್ನು ಇಲಾಖೆಗೆ ನೀಡಿದರೆ, ಆ ಕುರಿತು ಕೂಲಂಕಶವಾಗಿ ಪರಿಶೀಲಿಸಲಾಗುವುದು’ ಎಂದು ವೈಷ್ಣವ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.