ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪೌರತ್ವ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಶುಕ್ರವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಹುಲ್ ಪೌರತ್ವ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತದ ಪೌರತ್ವದ ಬಗ್ಗೆ ವಿಚಾರಿಸಲು ಹಾಗೂ ಗೃಹ ಸಚಿವಾಲಯದ ವಿಫಲತೆಯ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನನ್ನ ವಕೀಲರು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿಯವರು ಗೃಹ ಸಚಿವಾಲಯಕ್ಕೆ ಉತ್ತರಿಸಲು ನಿರಾಕರಿಸಿದ್ದಾರೆ ಆದ್ದರಿಂದಲೇ ನಾವು ಈ ಪಿಐಎಲ್ ಸಲ್ಲಿಸಿದ್ದೇವೆ. ನಮ್ಮ ವಕೀಲರಿಗೆ ಧನ್ಯವಾದ ಹೇಳುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಸುಬ್ರಮಣಿಯನ್ ಸ್ವಾಮಿ ಕಳೆದ ವಾರ ಹೇಳಿದ್ದರು.
ರಾಹುಲ್ ಅವರು ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎನ್ನಲಾದ ವಾರ್ಷಿಕ ರಿಟರ್ನ್ ಪ್ರತಿಯನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಸ್ವಾಮಿ, ‘ಇದು ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ರಿಟರ್ನ್ ಆಗಿದೆ. ಆದರೆ, ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳದಂತೆ ಸೋನಿಯಾ ಗಾಂಧಿ ಅವರಿಂದ ಮೋದಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆಯೇ’ ಎಂದು ಪ್ರಶ್ನಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು.
ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯ ಭಾಗವಾಗಿದ್ದರೂ ಆಗಾಗ್ಗೆ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಚೆಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗಲಿದೆ ಎಂದು ಹೇಳಿದ್ದರು. ಹಾಗೂ ಬಾಂಗ್ಲಾದೇಶದ ಅಶಾಂತಿ ಬಗ್ಗೆ ಮೋದಿಯನ್ನು ಗುರಿಯಾಗಿಸಿ ಸ್ವಾಮಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.