ನವದೆಹಲಿ: ‘ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ?’
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್‌ನ ಸಾಲು ಇದು.
‘ಪ್ರಸ್ತುತ ಆರ್ಥಿಕ ಅವ್ಯವಸ್ಥೆ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡುವಂತೆ ಕೋರಿ ಇತ್ತೀಚಿನ ದಿನಗಳಲ್ಲಿ ನನಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ಅಂಗಡಿ ಮಾಲೀಕರಿಂದಲೂ ಕರೆಗಳು ಬರುತ್ತಿವೆ. ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ ಎಂದು ಅವರೆಲ್ಲರ ಬಳಿ ನಾನು ಪ್ರಶ್ನಿಸುತ್ತೇನೆ. ಆರ್ಥಿಕತೆಗೆ ಸಂಬಂಧಿಸಿ ಮೋದಿಯವರಿಗೆ 12 ಪತ್ರಗಳನ್ನು ಬರೆದಿದ್ದೇನೆ. ಅವರು ಅವುಗಳನ್ನು ಸ್ವೀಕರಿಸಿದ್ದಾರೆಯೇ ವಿನಃ ಕ್ರಮ ಕೈಗೊಂಡಿಲ್ಲ’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ಅಂಗಡಿ ಮಾಲೀಕರಿಗೆಲ್ಲ ನಿಮ್ಮ ದೂರವಾಣಿ ಸಂಖ್ಯೆ ಸಿಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಸ್ವಾಮಿ, ಬಿಜೆಪಿ ವೆಬ್‌ಸೈಟ್ ಮತ್ತು ರಾಜ್ಯಸಭೆ ಸದಸ್ಯರ ಪುಸ್ತಕದಲ್ಲಿ ನನ್ನ ದೂರವಾಣಿ ಸಂಖ್ಯೆ ಇದೆ ಎಂದಿದ್ದಾರೆ.
ಸ್ವಾಮಿ ಅವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆಗಾಗ ಟೀಕಾ ಪ್ರಹಾರ ನಡೆಸುತ್ತಲೇ ಇರುತ್ತಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಸ್ವಾಮಿ ಅವರನ್ನು ಫ್ರೀಲ್ಯಾನ್ಸ್ ಪೊಲಿಟಿಷಿಯನ್ ಎಂದು ಕರೆದಿದ್ದೂ ಇತ್ತೀಚೆಗೆ ಚರ್ಚೆಯಾಗಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸ್ವಾಮಿ, ಅಧಿಕಾರಕ್ಕಾಗಿ ಬೂಟು ನೆಕ್ಕುವ ರಾಜಕಾರಣ ನನ್ನದಲ್ಲ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.