ನವದೆಹಲಿ: 'ಹೊಸ ಸಂಸತ್ ಭವನ ನಿರ್ಮಾಣಕ್ಕೆ ಟಾಟಾ ಆಯ್ಕೆಯಾಗಿದ್ದು ಹೇಗೆ?' ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಹೊಸ ಸಂಸತ್ತು ಸಂಕೀರ್ಣವನ್ನು ನಿರ್ಮಿಸಲು ಟಾಟಾ ಅನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂದು ಯಾರಿಗಾದರೂ ತಿಳಿದಿದೆಯೇ? ಬಿಡ್ ಮೂಲಕವೋ ಅಥವಾ 2 ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಅನುಸರಿಸಲಾದ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ರೀತಿಯೋ,' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸಂಸತ್ತಿನ ನೂತನ ಭವನದ ನಿರ್ಮಾಣದ, ₹ 861.90 ಕೋಟಿ ವೆಚ್ಚದ ನಿರ್ಮಾಣ ಗುತ್ತಿಗೆಯನ್ನು ಟಾಟಾ ಸಮೂಹ ಸಂಸ್ಥೆಯು ಪಡೆದುಕೊಂಡಿದೆ. ಎಲ್ಅಂಡ್‌ಟಿ ಕಂಪನಿ ₹ 865 ಕೋಟಿಗೆ ಬಿಡ್ ಮಾಡಿತ್ತು. ಸೆಂಟ್ರಲ್ ವಿಸ್ತಾ ಯೋಜನೆಯಡಿ ಈಗಿರುವ ಕಟ್ಟಡದ ಸಮೀಪವೇ ನೂತನ ಸಂಸತ್ ಭವನವನ್ನು ನಿರ್ಮಿಸಲಾಗುತ್ತದೆ. ಈ ಕಟ್ಟಡ ನಿರ್ಮಾಣ ಕಾರ್ಯ ಇಪ್ಪತ್ತೊಂದು ತಿಂಗಳಲ್ಲಿ ಪೂರ್ಣವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಸಂಸತ್‌ನ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ, 'ಇದೊಂದು ಮಹತ್ವದ ಯೋಜನೆಯಾಗಿದ್ದು, ಎಲ್ಲ ರೀತಿಯ ಯಶಸ್ಸು ಕಾಣಲಿ' ಎಂದು ಹೇಳಿದ್ದರು.
ಸಂಸತ್‌ನ ನೂತನ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಸಂಪುಟದ ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಲವು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.