ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸೂಕ್ತವಾಗಿ ನಿರ್ವಹಿಸದ ಕಾರಣಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ.
ವದಂತಿ ಕುರಿತಾದ 'ದಿ ಎಕನಾಮಿಕ್ ಟೈಮ್ಸ್' ವರದಿಯನ್ನು ಉಲ್ಲೇಖಿಸಿರುವ ಸುಬ್ರಮಣಿಯನ್ ಸ್ವಾಮಿ, 'ಅದು ಸಂಭವಿಸಿದಲ್ಲಿ: ಒಬ್ಬರು ಕೆಳಗಿಳಿಯಲಿದ್ದಾರೆ ಮತ್ತು ಇನ್ನಿಬ್ಬರು ಅದೇ ಹಾದಿ ಹಿಡಿಯಲಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಉಲ್ಲೇಖಿಸಿರುವ ಆ ಇಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇರಬಹುದು ಎಂದು ಶಂಕಿಸಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಸುಬ್ರಮಣಿಯನ್ ಸ್ವಾಮಿ ಟೀಕಿಸುವುದು ಸಾಮಾನ್ಯ ಎಂಬಂತಾಗಿದೆ. ಹಣದುಬ್ಬರವು ಬಡವರಿಗಿಂತ ಶ್ರೀಮಂತರನ್ನೇ ಹೆಚ್ಚು ಬಾಧಿಸುತ್ತಿದೆ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು 'ಬ್ರೆಡ್ ಕೊಳ್ಳಲು ಸಾಧ್ಯವಾಗದಿದ್ದರೆ ಕೇಕ್ ತಿನ್ನಲಿ ಬಿಡಿ' ಎಂಬ ಫ್ರೆಂಚ್‌ನ ಆಡು ಮಾತೊಂದನ್ನು ಉಲ್ಲೇಖಿಸಿ ಚಾಟಿ ಬೀಸಿದ್ದರು.
ಜಿನ್‌ಪಿಂಗ್ ಅಧಿಕಾರದಿಂದ ಕೆಳಗಿಳಿಯುವ ಕುರಿತು ಸಾಮಾಜಿಕ ತಾಣಗಳಲ್ಲಿ ವದಂತಿ ಹರಡುವ ಮುನ್ನ ಕೆನಡಿಯನ್ ಮೂಲದ ಬ್ಲಾಗರ್ ಒಬ್ಬರ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖಂಡರು ನಡೆಸಿದ ಉನ್ನತ ಸಭೆ ಬಳಿಕ ಕ್ಸಿ ಜಿನ್‌ಪಿಂಗ್ ಅಧಿಕಾರದಿಂದ ಕೆಳಗಿಳಿಯುವ ವಿಚಾರ ದಟ್ಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.