ಬೆಂಗಳೂರು: ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮನ್ನು ಫ್ರೀಲ್ಯಾನ್ಸ್ ಪೊಲಿಟಿಷಿಯನ್ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
'ನಾನು 6 ಬಾರಿ ಸಂಸದನಾಗಿದ್ದು ಮತ್ತು ಎರಡು ಬಾರಿ ಸಂಪುಟ ದರ್ಜೆಯ ಸ್ಥಾನಮಾನ ಪಡೆದಿದ್ದು ಬೂಟು ನೆಕ್ಕುವ ಮೂಲಕ ಅಲ್ಲ, ಅತ್ಯವಶ್ಯಕ ಸತ್ಯಗಳನ್ನು ಪ್ರಜಾಪ್ರಭುತ್ವಕ್ಕೆ ತಿಳಿಸುವ ಮೂಲಕ' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
'ಬೊಮ್ಮಾಯಿ ಅವರಂತಹ ಸಣ್ಣವರಿಗೆ ಪ್ರತಿಕ್ರಿಯಿಸಲು ನೀವು ತುಂಬ ದೊಡ್ಡವರು' ಎಂಬ ಕಮೆಂಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ಬಹುಷಃ ಇರಬಹುದು. ಆದರೆ ಅವರ ತಂದೆ ನನಗೆ ಆತ್ಮೀಯ ಸ್ನೇಹಿತ. ಬೊಮ್ಮಾಯಿ ನನಗೆ ಚಿಕ್ಕ ಹುಡುಗನಾಗಿ ಗೊತ್ತು. ಹಾಗಾಗಿ ನಾನು ಅವನಿಗೆ ಈಗಲೂ ಬಯ್ಯಬಹುದು' ಎಂದಿದ್ದಾರೆ.
ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಲವು ತಿಂಗಳುಗಳ ಹಿಂದೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಕುರಿತು ಸುಬ್ರಮಣಿಯನ್ ಸ್ವಾಮಿ ಮಾಡಿದ್ದ ಟ್ವೀಟ್ ಉಲ್ಲೇಖಿಸಿದಾಗ ಬಸವರಾಜ ಬೊಮ್ಮಾಯಿ ಅವರು ಸ್ವಾಮಿ ಅವರನ್ನು ಫ್ರೀಲ್ಯಾನ್ಸ್ ಪೊಲಿಟಿಷಿಯನ್ ಎಂದಿದ್ದರು. ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದೂ ಶ್ಲಾಘಿಸಿದ್ದರು.
‘ಪೆಟ್ರೋಲ್ ಬೆಲೆ ರಾಮನ ಭಾರತದಲ್ಲಿ ₹93, ಸೀತೆಯ ನೇಪಾಳದಲ್ಲಿ ₹51, ರಾವಣನ ಶ್ರೀಲಂಕಾದಲ್ಲಿ ₹51’ ಎಂದು ಟ್ವೀಟ್ ಮಾಡಿದ್ದು ನಿಮ್ಮ ಪಕ್ಷದವರೇ ಆದ ಸುಬ್ರಮಣಿಯನ್ ಸ್ವಾಮಿ. ಇದಕ್ಕೆ ಏನು ಹೇಳುತ್ತೀರಿ’ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯನ್ನು ಕುಟುಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.