ADVERTISEMENT

ಭಾರತವನ್ನು ಬಿಜೆಪಿ ಹಿಂದೂ ರಾಷ್ಟ್ರವಾಗಿಸುತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ

ಪಿಟಿಐ
Published 28 ಆಗಸ್ಟ್ 2020, 1:28 IST
Last Updated 28 ಆಗಸ್ಟ್ 2020, 1:28 IST
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ   

ನವದೆಹಲಿ: ಬಿಜೆಪಿಯು ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುತ್ತಿಲ್ಲ ಎಂದು ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಹಾಗೆ ಮಾಡುವುದಕ್ಕೆ ಸಂವಿಧಾನದಲ್ಲಿಯೂ ಅವಕಾಶವಿಲ್ಲ. ಆದರೆ, ಹಿಂದುತ್ವ ಸಿದ್ಧಾಂತವು ಅಸ್ತಿತ್ವದಲ್ಲಿರುವವರೆಗೂ ಪಕ್ಷ ಅಧಿಕಾರದಲ್ಲಿರಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ, ಹಿಂದೂಗಳನ್ನು ವಿಭಜಿಸುವ ಮೂಲಕ ಕಾಂಗ್ರೆಸ್ ಹಿಂದೆ ಸರ್ಕಾರಗಳನ್ನು ರಚಿಸಿತ್ತು. ಹಿಂದೂಗಳು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ರಾಜಕೀಯವಾಗಿ ಒಗ್ಗಟ್ಟಾಗಬೇಕಿದೆ ಎಂದು ಸ್ವಾಮಿ ಹೇಳಿದ್ದಾರೆ.

‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್’ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ADVERTISEMENT

‘ಹಲವಾರು ವರ್ಷಗಳಿಂದ ಕಾಂಗ್ರೆಸ್ ಹಿಂದೂಗಳನ್ನು ಒಡೆಯುತ್ತಿತ್ತು ಮತ್ತು ಅಲ್ಪಸಂಖ್ಯಾತರನ್ನು ಒಂದುಗೂಡಿಸುತ್ತಿತ್ತು. ಇದರಿಂದ ಮತ್ತೆ ಮತ್ತೆ ಸರ್ಕಾರ ರಚಿಸುವುದು ಆ ಪಕ್ಷಕ್ಕೆ ಸಾಧ್ಯವಾಗಿತ್ತು.

‘ಆರ್ಯರು, ದ್ರಾವಿಡರು, ಜಾತಿ ಮತ್ತಿತರ ಇತಿಹಾಸದ ಬೋಗಸ್ ವಿಚಾರ ಮುಂದಿಟ್ಟುಕೊಂಡು ಹಿಂದೂಗಳನ್ನು ಕಾಂಗ್ರೆಸ್ ಒಡೆದಿದೆ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಯ ಮತಹಂಚಿಕೆ ಪ್ರಮಾಣ ಹೆಚ್ಚಾಗಲು ಹಿಂದುತ್ವ ಸಿದ್ಧಾಂತವೇ ಕಾರಣ. ಹಿಂದುತ್ವ ಸಿದ್ಧಾಂತ ಹೀಗೆಯೇ ಇದ್ದರೆ ಚುನಾವಣೆಗಳನ್ನು ನಾವು ಗೆಲ್ಲುತ್ತಾ ಸಾಗಲಿದ್ದೇವೆ. ಆರ್ಥಿಕ ಸಾಧನೆ ನಗಣ್ಯವಾಗಲಿದೆ. ಆದರೆ, ಅದು ತೀರಾ ಕಳಪೆಯಾಗಬಾರದು’ ಎಂದೂ ಸ್ವಾಮಿ ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಒಗ್ಗಟ್ಟಾಗುವಂತೆ ಹಿಂದೂಗಳಿಗೆ ಕರೆ ನೀಡಿದ ಅವರು, ರಾಜಕೀಯವಾಗಿ ಹಿಂದೂಗಳು ಜಾತಿ, ಪ್ರದೇಶ, ಭಾಷೆ ಆಧಾರದಲ್ಲಿ ಪ್ರತ್ಯೇಕವಾಗಬಾರದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.