ನವದೆಹಲಿ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದ ಟಿಬೆಟ್ ಮತ್ತು ತೈವಾನ್ ಚೀನಾದ ಭಾಗಗಳು ಎಂದು ಒಪ್ಪಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಚೀನಾದ ಗಡಿ ಉಪಟಳದ ಬಗ್ಗೆ ನಿರಂತರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸುಬ್ರಮಣಿಯನ್ ಸ್ವಾಮಿ ಅವರು ಆರಂಭದಲ್ಲಿ ಜವಾಹರಲಾಲ್ ನೆಹರೂ ಮತ್ತು ನಂತರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ತೈವಾನ್ ಕಮ್ಯೂನಿಸ್ಟ್ ಚೀನಾದ ಭಾಗವೆಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಉಭಯ ರಾಷ್ಟ್ರಗಳು ಪರಸ್ಪರ ಒಪ್ಪಿತ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಚೀನಾ ಗೌರವಿಸುತ್ತಿಲ್ಲ. ಲಡಾಖ್‌ನ ಭಾಗಗಳನ್ನು ಚೀನಾ ಆಕ್ರಮಿಸಿಕೊಂಡಿದೆ. ಈ ನಡುವೆ ಬುದ್ಧಿಮಾಂದ್ಯರಾಗಿರುವ ಪ್ರಧಾನಿ ನರೇಂದ್ರ ಮೋದಿ 'ಯಾರೂ ಒಳಗೆ ಬಂದಿಲ್ಲ' ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಚುನಾವಣೆಗಳು ಇರಬೇಕು ಎಂಬುದನ್ನು ಚೀನಾ ತಿಳಿದುಕೊಂಡಿರಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ತೈವಾನ್‌ನಲ್ಲಿ ಭಾರತೀಯ ಯುವಕನೊಬ್ಬ ಕಾಫಿ ಕುಡಿಯುತ್ತಿದ್ದ ವೇಳೆ ಮಾಸ್ಕ್ ಧರಿಸದಿರುವುದನ್ನು ಅಲ್ಲಿನ ಸ್ಥಳೀಯನೊಬ್ಬ ಪ್ರಶ್ನಿಸುತ್ತಿರುವ ವಿಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟಿಸಿದ್ದಾರೆ. ಇಂತಹ ಜನಾಂಗ ದ್ವೇಷದ ಸ್ವಭಾವ ಹೊಂದಿರುವವರ ದೇಶಕ್ಕೆ ಭಾರತ ಏಕೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ತೈವಾನ್ ಒಂದು ಸ್ವತಂತ್ರ ರಾಷ್ಟ್ರ ಎಂಬುದನ್ನು ಭಾರತ ಪರಿಗಣಿಸದೆ ಇರುವ ಸಂದರ್ಭದಲ್ಲಿ ಭಾರತೀಯ ಪ್ರಜೆಗೆ ಅಲ್ಲೇನು ಕೆಲಸ? ಎಂದು ಪ್ರಶ್ನಿಸಿದ್ದಾರೆ.
ತೈವಾನ್‌ಗೆ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿ ನೀಡಿರುವುದನ್ನು ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ, ತೈವಾನ್ ಮೇಲೆ ವ್ಯಾಪಾರ ನಿರ್ಬಂಧಗಳನ್ನು ಹೇರಲು ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.