ನವದೆಹಲಿ: ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭಾರತಕ್ಕೆ ಆಹ್ವಾನಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಭಾರತದಲ್ಲಿ ನೆಲೆಸಲು ಅಶ್ರಫ್ ಘನಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದಿರುವ ಸುಬ್ರಮಣಿಯನ್ ಸ್ವಾಮಿ, ಇದರಿಂದ ಭಾರತದ ಭದ್ರತೆಗೆ ಅನುಕೂಲಕರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಶ್ರಫ್ ಘನಿ ಉನ್ನತ ಶಿಕ್ಷಣ ಹೊಂದಿದ್ದಾರೆ. ಬಹುಷಃ ಅಮೆರಿಕದಲ್ಲಿ ಶಿಕ್ಷಣ ಪಡೆದಿರಬೇಕು. ಮುಂದಿನ ದಿನಗಳಲ್ಲಿ ಅಫ್ಗಾನಿಸ್ತಾನದಲ್ಲಿ ವಲಸಿಗ ಸರ್ಕಾರ ರಚನೆಯಾಗಲಿದೆ. ಮುಂದೆ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದರೆ ಭಾರತಕ್ಕೆ ಅಶ್ರಫ್ ಘನಿ ಸಹಾಯ ಮಾಡುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಪಡೆ ಅಫ್ಗಾನಿಸ್ತಾನದಿಂದ ಹಂತ ಹಂತವಾಗಿ ಕಾಲ್ಕೀಳುತ್ತಿದ್ದಂತೆ ತಾಲಿಬಾನ್ ತನ್ನ ಪ್ರಭಾವನ್ನು ವೃದ್ಧಿಸಿಕೊಂಡಿತು. ತಾಲಿಬಾನ್ ಪಡೆ ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ಅನ್ನು ವಶ ಪಡಿಸಿಕೊಂಡ ಬೆನ್ನಲ್ಲೇ ಅಶ್ರಫ್ ಘನಿ ದೇಶ ತೊರೆದು ಪಲಾಯನಗೈದಿದ್ದರು. ಇದೀಗ ಯುಎಇನಲ್ಲಿ ಅಶ್ರಫ್ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಅಶ್ರಫ್ ಘನಿ ಏನು ಓದಿದ್ದಾರೆ ಮತ್ತು ಯಾವೆಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ?
ಲೆಬನನ್ ರಾಜಧಾನಿ ಬೈರುತ್‌ನಲ್ಲಿರುವ 'ಅಮೆರಿಕನ್ ಯೂನಿವರ್ಸಿಟಿ ಆಫ್ ಬೈರುತ್'ನಲ್ಲಿ ಬಿಎ ಪದವಿ ಪಡೆದಿದ್ದಾರೆ. ಕೊಲಿಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಎ ಹಾಗೂ ಪಿಎಚ್‌ಡಿ ಮಾಡಿದ್ದಾರೆ. ಆರಂಭಿಕ ದಿನಗಳಲ್ಲಿ ಕಾಬೂಲ್ ವಿಶ್ವವಿದ್ಯಾಲಯ ಹಾಗೂ ಡೆನ್ಮಾರ್ಕ್‌ನ ಆರ್‌ಹುಸ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬರ್ಕಲಿಯ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಬೋಧಿಸಲು ಆಹ್ವಾನಿತರು ಕೂಡ. ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿಯಲ್ಲಿ ಪಾಠ ಹೇಳಿದ್ದಾರೆ. ಹಾರ್ವರ್ಡ್ ಇನ್‌ಸೀಡ್ ಮತ್ತು ವರ್ಲ್ಡ್ ಬ್ಯಾಂಕ್ - ಸ್ಟಾನ್‌ಫರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ನಾಯಕತ್ವದ ಬಗ್ಗೆ ತರಬೇತಿ ನೀಡಿದ್ದಾರೆ. ಪಾಕಿಸ್ತಾನಿ ಮದ್ರಸಾಗಳ ಬಗ್ಗೆ ಸಂಶೋಧನೆಯನ್ನು ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.